ಗುರುವಾರ ೧೫ ಜನವರೀ ೨೦೦೯

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ

ಕನ್ನಡ ಜನರು ಜಗತ್ತಿನಲ್ಲಿ ಯಾವುದೇ ಜನಾಂಗಕ್ಕೂ ಕಮ್ಮಿ ಇಲ್ಲ, ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಬೇಕು, ಹಾಗೆ ಸಾಧಿಸಲು ಉತ್ತೇಜನ ನೀಡುವಂತಹ ವಾತಾವರಣ ನಾಡಿನಲ್ಲಿ ಉಂಟಾಗಬೇಕು ಎಂಬ ಆಶಯದೊಂದಿಗೆ ,. ನಮ್ಮ ನಾಡು ಸಮೃದ್ಧಿಯ ಬೀಡಾಗಬೇಕು ಅನ್ನುವ ಗುರಿ ಮುಟ್ಟಲು, ಜಗತ್ತಿನಲ್ಲಿ ಇರುವ ಎಲ್ಲಾ ಕನ್ನಡಿಗರ ಸಹಕಾರದಲ್ಲಿ, ಗುರಿ ಮುಟ್ಟುವ ಹೆಜ್ಜೆಗಳನ್ನು ಇಂದೇ ಗುರುತಿಸಿ, ದಿಕ್ಕಿನಲ್ಲಿ ನಾಡು-ನುಡಿ-ನಾಡಿಗರನ್ನು ಕೊಂಡೊಯ್ಯಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದೆ.
ನಿಟ್ಟಿನಲ್ಲಿ ಜನವರಿ ೧೮ ನೇ ತಾರೀಖು ನಡೆಯುವ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ಬಹಳ ಒಳ್ಳೆಯ ಕಾರ್ಯಕ್ರಮ. ಬರೀ ಸಮಸ್ಯೆಗಳನ್ನು ಹೇಳಿಕೊಂಡು,
ನಾವು ಉದ್ದಾರ ಆಗೊಲ್ಲ ಅನ್ನೊ ರೀತಿಯಲ್ಲಿ, ಒಂದೆರೆಡು ವರದಿ ಜಾರಿ ಆಗಬೇಕು ಅದರಿಂದಲೇ ಇಡಿ ಕರ್ನಾಟಕದ ಉದ್ದಾರ ಅನ್ನೊ ಮಾತುಗಳನ್ನು ಆಡುವರ ಮಧ್ಯೆ
ಇದು ಎದ್ದು ನಿಲ್ಲುತ್ತದೆ. ಉದ್ಯೋಗ-ಉದ್ದಿಮೆ ಮೇಲೆ ನಡೆಯುವ ವಿಚಾರ ಸಂಕೀರ್ಣ ನಿಜಕ್ಕೂ ಸ್ವಾಗತಾರ್ಹ ಕ್ರಮ, ಯಾಕೆಂದರೆ ಕನ್ನಡ ಹೊಟ್ಟೆಯ ಹಿಟ್ಟಿನ ಭಾಷೆ ಆಗಬೇಕೆಂಬ ವಿಚಾರ ಹೊಸದು ಮತ್ತು ಪ್ರಚಲಿತ, ಇದನ್ನು ಕೈಗೆತ್ತಿಕೊಂಡಿರುವ ವೇದಿಕೆ ವಿಷನ್ ಮತ್ತು ಮಿಷನ್ ಎರಡನ್ನು ಇಟ್ಟುಕೊಂಡು ಕೆಲ್ಸ ಮಾಡುತ್ತಿದೆ.
ಎಲ್ಲ ಕನ್ನಡಿಗರೂ ಇದರಲ್ಲಿ ಪಾಲ್ಗೊಂಡು, ನಮ್ಮ ಬೆಂಬಲ ಕೊಡಬೇಕು..ಎನಂತೀರಿ..ಅನ್ನುವುದು ಎನು ನಮ್ಮ ಮುಂದೆ ಇರುವುದೇ ಎರಡು ಆಯ್ಕೆ
ಉದ್ದಾರ ಆಗು, ಇಲ್ಲ ಕೊರಗುತ್ತ ಸಾಯಿ ಅನ್ನುವದರ ಮಧ್ಯೆ ಯಾವುದನ್ನು ಆಯ್ಕೆ ಮಾಡುತ್ತಿರಿ ನೀವೆ ಹೇಳಿ ?




(ಸ್ನೇಹ ಸೇತು - ಪ್ರವೀಣ್ ಬಿ.ಎಸ್.)
http://chum-banavaasi.blogspot.com/

ಮಂಗಳವಾರ ೨ ಡಿಸೆಂಬರ್ ೨೦೦೮

ಕರ್ನಾಟಕಕ್ಕೆ ಐ ಐ ಟಿ ಇಲ್ಲ?

ನಮ್ಮ ಕರ್ನಾಟಕ್ಕೆ ಒಂದು ಐ ಐ ಟಿ ಕೊಡಿ ಅಂತ ಕೇಂದ್ರವನ್ನ ಸುಮಾರು ವರ್ಷಗಳಿಂದ ನಮ್ಮ ರಾಜ್ಯ ಸರಕಾರ ಬಾಯಿ ಬಡ್ಕೊತಿದ್ರು ಕೇಂದ್ರ ಮಾತ್ರ ತಣ್ಣಗೆ ನಗುತ್ತಾ ಕೂತಿದೆ.
ಇವತ್ತು ನಮ್ಮ ಭಾರತ ಶೈಕ್ಷಣಿಕ ಕ್ಷೇತ್ರದಲ್ಲಿ ಐ ಐ ಟಿ ಗೆ ತನ್ನದೇ ಆದ ಒಂದು ಸ್ಥಾನವಿದೆ.
ಐ ಐ ಟಿ ಅಂದ್ರೆ ಏನು?
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲೋಜಿ (ಐಐಟಿ) ಅನ್ನೋದು ನಮ್ಮ ದೇಶದಲ್ಲಿರೋ ೧೩ ಶಿಕ್ಷಣ ಸಂಸ್ಥೆಗಳ ಒಂದು ಸಮೂಹ. ಇವುಗಳನ್ನ ನಮ್ಮ ಪಾರ್ಲಿಮೆಂಟ್, ದೇಶದ "ಮಹತ್ವದ ಶಿಕ್ಷಣ ಸಂಸ್ಥೆಗಳು" ಎಂದು ಘೋಷಿಸಿದೆ. ಐಐಟಿ ಸ್ಥಾಪನೆಯ ಮೂಲ ಉದ್ದೇಶ ದೇಶದ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಯನ್ನು ಬಲಪಡಿಸಲು ಬೇಕಾಗಿರುವ ವಿಜ್ಞಾನಿಗಳು ಮತ್ತು ಎಂಜಿನೀಯರಗಳನ್ನು ತಯಾರು ಮಾಡುವುದು.
ಇವತ್ತು ಒಬ್ಬ ವ್ಯಕ್ತಿ ಐಐಟಿ ಯಲ್ಲಿ ಓದಿದಾನೆ ಅಂದ್ರೆ ಬಹಳಷ್ಟು ಜನ ಹೆಮ್ಮೆ ಪಡ್ತಾರೆ.

ಇಂತಹ ಸಂಸ್ಥೆಗಳು ನಮ್ಮ ರಾಜ್ಯದಲ್ಲೂ ಇರೋದು ಬೇಡವೇ? ಇಂತಹುದೇ ಅರ್ಜಿಯೊಂದಿಗೆ ನಮ್ಮ ಶಿಕ್ಷಣ ಸಚಿವರು ಕೇಂದ್ರಕ್ಕೆ ಪತ್ರ ಬರೆದರೆ ಅದರ ಉತ್ತರ: ಕರ್ನಾಟಕದಲ್ಲಿ ಈಗಾಗಲೇ ಐ ಐ ಎಸ್ ಸಿ ಮತ್ತು ಐಐಎಮ ತರಹದ ಸಂಸ್ಥೆಗಳಿವೆ ಹಾಗಾಗಿ ಐಐಟಿ ಮಂಜೂರು ಮಾಡಲು ಸಾಧ್ಯವಿಲ್ಲ ಅಂತ ತಳ್ಳಿ ಹಾಕಿವೆ.

ಒಮ್ಮೆ ಯೋಚಿಸಿ ಇವತ್ತು ಪ್ರಪಂಚದೆಲ್ಲೆಡೆ ಕರ್ನಾಟಕ ಅಂದ್ರೆ ಮಾಹಿತಿ ತಂತ್ರಜ್ಞಾನದ ರಾಜಧಾನಿ ಅಂತಾನೆ ಕರಿತಾರೆ ಇಲ್ಲೂ ಒಂದು ಐಐಟಿ ಯಂತಹ ಶಿಕ್ಷಣ ಸಂಸ್ಥೆ ಬೇಕು ಅಂತ ಅನ್ನಿಸೋಲ್ವಾ? ಸ್ವತಃ ವಿಜ್ಞಾನಿ ಯು.ಆರ್. ರಾವ್ ಕೇಂದ್ರದ ಜೊತೆ ಮಾತಾಡಿದ್ರು ಸಹ ಕೇಂದ್ರಕ್ಕೆ ಇದು ಅರ್ಥ ಆಗ್ತಿಲ್ಲ. ಅಥವಾ ಅರ್ಥ ಆದರು ಯಾಕೆ ಬೇಕು ಅನ್ನೋ ಉದಾಸಿನತೆಯೋ?

ಹಾಗೆ ನೋಡಿದ್ರೆ ಐ ಐ ಎಸ್ ಸಿ ಏನು ಕೇಂದ್ರ ಸರಕಾರ ನೋಡ್ಕೊಳ್ಳಲ್ಲ, ಅದು ಟಾಟಾ ಅವರ ಸ್ವತ್ತು ಮತ್ತು ಅವರ ಆಡಳಿತದಲ್ಲಿ ನಡೆಯುತ್ತದೆ. ಕೇಂದ್ರ ಸರಕಾರ ಕರ್ನಾಟಕಕ್ಕೆ ಅಂತ ಕೊಟ್ಟಿರೋದು ಐಐಎಮ ಮಾತ್ರ.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮುಂದುವರಿಯುತ್ತಲೇ ಇದೆ. ಆದ್ರೆ ಕೇಳೋಕೆ ನಮ್ಮ ಸಂಸದರಿಗೆ ಸಮಯ ಇಲ್ಲ, ಇದ್ದೋರಿಗೆ ಈ ಐಐಟಿ ಅಂದ್ರೆ ಏನು ಅಂತ ಗೊತ್ತಿರಲ್ಲ.

ಇದಕ್ಕೂ ಒಂದು ದೊಡ್ಡ ಹೋರಾಟ ಮಾಡೋ ತನಕ ಕೇಂದ್ರ ನಮಗೆ ನೀಡಲ್ಲ ಅಂತ ಅನ್ನಿಸುತ್ತೆ. ಏನಂತೀರ?

ರವಿವಾರ ೩೦ ನವೆಂಬರ್ ೨೦೦೮

ಡೈರಿಯ ಕೆಲವು ಹಾಳೆಗಳು: ಕೊನೆಯ ಭಾಗ

ದಿನಾಂಕ: ೧೦-ಎಪ್ರಿಲ್
ರಾಜೇಶ್:
ಅವಳ ತಂದೆ ತೀವ್ರ ಅಸ್ವಸ್ಥ ಆಗಿದ್ರು. ನನಗೆ ಮುಂಚಿನಿಂದ ಅವರ ಕುಟುಂಬದ ಪರಿಚಯ ಇದ್ದಿದರಿಂದ ನಾನು ಅವರಿಗೆ ಸಹಾಯ ಮಾಡಿದೆ. ಅವಳು ಒಂದು ವಾರದ ತನಕ ಆಫಿಸಿಗೆ ಹೋಗಲು ಆಗಿರಲಿಲ್ಲ, ನಾನೇ ಅವರ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ರಜಾ ಸಿಗುವಂತೆ ಮಾಡಿದೆ. ನನಗನ್ನಿಸುತ್ತೆ ಹೋದ ವಾರ ನನಗೆ ಬಹಳ ಸಹಾಯಕವಾಗಿದೆ ಅಂತ, ನನಗೆ ಅವಳ ಜೊತೆ ಮತ್ತು ಅವಳ ಮನೆಯವರ ಜೊತೆ ಹತ್ತಿರವಾಗಲು ಬಹಳ ಸಹಾಯಕವಾಗಿತ್ತು . ವಿಧಿ ನನಗೆ ಅವಳನ್ನು ಹತ್ತಿರ ಸೆಳೆದುಕೊಳ್ಳಲು ಬಹಳ ಒಳ್ಳೆಯ ಅವಕಾಶ ಕೊಟ್ಟಿದೆ, ನಾನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತೇನೆ.
ದಿನಾಂಕ:೨೫-ಎಪ್ರಿಲ್
ಅವಳು:
ಬಹಳ ದಿನಗಳ ನಂತರ ನಾನು ನಿರುವನ್ನು ಭೇಟಿ ಮಾಡಿದೆ. ಅವನು ಕಾಫಿಯ ವಿಚಾರವಾಗಿ ಬಹಳ ಸಿಟ್ಟಾಗಿರುತ್ತಾನೆ ಅಂತ ಅಂದುಕೊಂಡಿದ್ದೆ ಆದ್ರೆ ನಾನು ಇಷ್ಟು ದಿನ ಆಫಿಸ್ಸಿಗೆ ಬರದಿದ್ದುದ್ದಕ್ಕೆ ಬಹಳ ಘಾಬರಿಗೊಂಡಿದ್ದ. ನಾನು ನಮ್ಮ ತಂದೆ ಖಾಯಿಲೆಗೆ ಬಿದದ್ದನ್ನ ವಿವರವಾಗಿ ಹೇಳಿದೆ. ಅವನು ನನ್ನ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿ ನಂತರ ನನ್ನ ಗಮನ ಬೇರೆಡೆ ಸೆಳೆಯಲು ಇನ್ನೇನೋ ಮಾತನಾಡುತ್ತಾ ಕುಳಿತ. ಅವನು ನನ್ನನ್ನ ನನ್ನ ತಂದೆಯ ವಿಷಯದಿಂದ ಹೊರತರಲು ಪ್ರಯತ್ನಿಸುತ್ತಿದ್ದ. ಅವನು ನಿಜಕ್ಕೂ ಸಮಚಿತ್ತದ ಹುಡುಗ, ನನಗೆ ಗೊತ್ತಿತ್ತು ಅವನು ಪರಿಸ್ಥಿತಿಯನ್ನು ಅರ್ಥ ಮಾಡ್ಕೋತಾನೆ ಅಂತ.
ದಿನಾಂಕ:೨೦-ಮೇ
ಅವಳು:
ನಿರು ಮತ್ತು ನಾನು ಬಹಳ ದಿನಗಳಿಂದ ಒಟ್ಟಿಗೆ ತಿರುಗಾಡುತ್ತಿದ್ದೇವೆ. ನನವನ್ನನ್ನ ಪ್ರೀತಿಸಲು ಶುರು ಮಾಡಿದ್ದೇನೆ. ಅವ್ನು ಕೂಡ ನಮ್ಮಿಬರ ವಿಷಯವನ್ನ ಸೀರಿಯಸ್ ಆಗಿ ತಗೊಂಡಿದಾನೆ, ಆದ್ರೆ ಅವ್ನು ನನಗಿಂತ ಚಿಕ್ಕವನು. ಹಾಗೇನೇ ಅವನು ಈಗಲೇ ಯಾವುದೇ ಕಮಿಟ್ಮೆಂಟ್ ಗೆ ತಯಾರಗಿದಾನೆ ಅಂತ ನನಗೆ ಅನ್ನಿಸೋಲ್ಲ. ಆದ್ರೆ ಮನೆಯಲ್ಲಿ ಅಪ್ಪ ಅಮ್ಮ ನನಗೆ ದಿನ ಮದುವೆಗೆ ಒತ್ತಾಯಿಸುತ್ತಿದ್ದಾರೆ: ಏನು ಮಾಡಲಿ? ನನವನನ್ನ ನೇರವಾಗಿ ಕೇಳಿಬಿಡ್ಲಾ?
ದಿನಾಂಕ:೨೨-ಮೇ
ಅವಳು:
ಇವತ್ತು ನಿರು ತಾನು ಕೆಲಸ ಬಿಡುತ್ತಿರುವ ವಿಷಯ ಹೇಳಿದ. ಅವನಿಗೆ ಮುಂಬಯಿಯಲ್ಲಿ ಎಂ ಬಿ ಏ ಗೆ ಸೀಟು ಸಿಕ್ಕಿದೆ. ೨ ವರ್ಷ ಅವನಿಂದ ದೂರ ಇರೋದು ನನ್ನಿಂದ ಅಗೋ ಕೆಲಸವಲ್ಲ. ಅವನನ್ನ ಮಾಡುವೆ ಮಾಡ್ಕೋ ಅಂತ ಕೇಳ್ಲಾ? ಅವನು ಅದಕ್ಕೆ ಹ್ಞೂ ಅಂತಾನ ಅಥವಾ ಇನ್ನೆರಡು ವರ್ಷ ನನ್ನ ಓದು ಮುಗಿಯುವ ತನಕ ಕಾಯಿ ಅಂತ ಹೇಳ್ತಾನ? ಆದ್ರೆ ನಾನು ಅಲ್ಲಿ ತನಕ ಕಾಯಲು ಸಿದ್ಧಳಿಲ್ಲ. ಅವನನ್ನ ನನ್ನ ಮದುವೆ ಆಗು ಅಂತ ಸೀದಾ ಕೇಳಿಬಿಡ್ತೀನಿ, ಅವನು ಏನು ಅಂತ ಹೇಳ್ತಾನೋ ನೋಡೋಣ.
ದಿನನಕ:೨೩-ಮೇ
ರಾಜೇಶ್:
ಇವತ್ತು ನಾನವಳಿಗೆ ಪ್ರೊಪೋಸ್ ಮಾಡಿದೆ. ಅವಳು ತನ್ನ ಮುಖದಲ್ಲಿ ಯಾವುದೇ ಭಾವನೆಗಳನ್ನ ತೋರಗೊಡಲಿಲ್ಲ. ನನಗೆ ಗೊತ್ತು ಅವಳು ಖಂಡಿತ ಒಪ್ಗೊತಾಳೆ ಅಂತ. ಕಾಲೇಜಿನಲ್ಲಿ ಅವಳಿಗೆ ನನ್ನ ಮೇಲೆ ಕ್ರಷ್ ಇತ್ತು ಅನ್ನೋದು ನನಗೆ ಗೊತ್ತಿದೆ. ನನಗನ್ನಿಸುತ್ತೆ ಅವಳು ನನ್ನ ಸ್ವೀಕರಿಸುತ್ತಾಳೆ ಅಂತ. ನಿರು ನಮ್ಮಿಬರ ನಡುವೆ ಬರೋಲ್ಲ ಅನ್ನೋದನ್ನ ಖಾತರಿ ಮಾಡ್ಕೊಬೇಕಾಗಿದೆ. ಅವನಿಲ್ಲ ಅಂದ್ರೆ ಎಲ್ಲ ಸರಾಗವಾಗಿ ನಡೆಯುತ್ತೆ.ಅವಳ ಮತ್ತೆ ನನ್ನ ತಂದೆ ತಾಯಿ ಕಡೆಯಿಂದಾನು ಯಾವುದೇ ಆಕ್ಷೇಪಣೆ ಬರೋದಿಲ್ಲ. ನಾನು ಮತ್ತು ಅವಳು ಮದುವೆ ಆಗುತ್ತಿವಿ ಅಂದ್ರೆ ಅವರು ಬಹಳಾನೇ ಖುಷಿ ಪಡ್ತಾರೆ.

ಅವನು:
ಇವತ್ತು ಅವಳು ಕರೆ ಮಾಡಿ ಕಾಫಿಗೆ ನಮ್ಮ ಮಾಮೂಲಿ ಜಾಗದಲ್ಲಿ ಸಿಗು ಅಂತ ಹೇಳಿದ್ಲು, ಆದ್ರೆ ಅದೇನಾಯಿತೋ ಗೊತ್ತಿಲ್ಲ ಅಚಾನಕ್ಕಾಗಿ ಕರೆ ಮಾಡಿ ಸಿಗೋದು ಬೇಡ ಅಂತ ಹೇಳಿದ್ಲು. ಯಾಕೆ ಅಂತ ಗೊತ್ತಾಗ್ಲಿಲ್ಲ. ಅವಳು ಮಾತನಾಡುವಾಗ ಬಹಳ ಬಳಲಿದಂತೆ ಕಂಡಳು, ಬಹುಷಃ ಕೆಲಸ ಬಹಳ ಆಗಿರಬೇಕು ಅಂದುಕೊಂಡು ಸುಮ್ಮನಾದೆ. ಆದ್ರೆ ಅವಳನ್ನ ಸಾಯಂಕಾಲ ಬಸ್ಸಿನಲ್ಲಿ ನೋಡಿದಾಗ ಅವಳು ಮಾತನಾಡುವ ಲಹರಿಯಲ್ಲಿರಲಿಲ್ಲ, ಯಾಕೋ ಮಂಕಾಗಿದ್ದಳು. ಅವಳು ಸುಮ್ನೆ ನನ್ನ ಕೈ ಹಿಡಿದುಕೊಂಡಳು. ಅವಳು ಏನೋ ಹೇಳ್ಬೇಕು ಅಂತ ಅಂದ್ಕೊತಿದ್ಲು ಆದ್ರೆ ಅವಳಿಗೆ ಆಗ್ತಿರಲಿಲ್ಲ. ಅವಳು ಏನು ಹೇಳಬೇಕು ಅಂತಿದ್ಲು ಅಂತ ನನಗೆ ಗೊತ್ತಾಯಿತು ಆದ್ರೆ ನಾನು ಮೌನವಾಗಿದ್ದೆ. ನಾನಿಳಿಯುವ ಜಾಗ ಹತ್ತಿರ ಬರುತ್ತಿದಹಾಗೇನೆ, ಅವಳು ನನ್ನ ಕೈ ಹಿಡಿತ ಸಡಿಲಿಸಿದಳು. ಅವಳು ಏನೊಂದೂ ಮಾತನಾಡಲಿಲ್ಲ, ಮುಖದ ಮೇಲಿನ ನೋವು ಭರಿತ ನಗುವಿನ ಹೊರೆತು.

ರಾತ್ರಿ ಊಟದ ನಂತರ ಅವಳಿಗೆ ಕರೆ ಮಾಡಿದೆ ಆದ್ರೆ ಅವಳು ಕರೆ ಸ್ವೀಕರಿಸಲಿಲ್ಲ. ಕೆಲಸದ ಒತ್ತಡ ಬಹಳ ಇರಬೇಕು ಅದಕ್ಕೆ ಬೇಗ ಮಲಗಿದ್ದಾಳೆ ಅಂದುಕೊಂಡು ಸುಮ್ಮನಾದೆ. ಏನು ಕೆಟ್ಟದ್ದು ಸಂಭವಿಸಿರಲಾರದು ಅಂತ ಅಂದುಕೊಳ್ತೇನೆ. ಓ ದೇವ್ರೇ ಅವಳನ್ನ ಕಾಪಾಡು.

ಅವಳು:
ಇವತ್ತು ನನ್ನ ಜೀವನದ ಅತ್ಯಂತ ಕರಾಳ ದಿನ. ರಾಜೇಶ್ ಇವತ್ತು ನನಗೆ ಪ್ರೊಪೋಸ್ ಮಾಡಿದ. ನನ್ನ ಜೀವನೋತ್ಸಾಹ ಬಸಿದು ಹೋಯಿತು. ನಾನು ಕಾಲೇಜಿನಲ್ಲಿ ಅವನನ್ನ ಪ್ರೀತಿಸುತ್ತಿದ್ದೆ ಆದ್ರೆ ಅವನು ಅದಕ್ಕೆ ಲಕ್ಷ್ಯ ಕೊಡಲಿಲ್ಲ. ಕೆಲವು ಸಾರಿ ಬೇಕುಂತಲೇ ನನ್ನನ್ನ ದೂರ ಇಡುತ್ತಿದ್ದ. ಬಹಳ ಪ್ರಯತ್ನ ಪಟ್ಟು ಆ ನೋವಿನಿಂದ ಹೊರಬಂದಿದ್ದೆ. ನಾನವನನ್ನ ಪ್ರೀತಿಸುತ್ತಿದ್ದೆ, ಆದ್ರೆ ಅವನು ನನ್ನ ದೂರ ತಳ್ಳಿದ. ಪ್ರೀತಿಯೇನು ಒಪ್ಪಂದದ ಮೇರೆಗೆ ಮಾಡುವಂತಹುದಲ್ಲ. ಅವನ ಮೇಲಿನ ಭಾವನೆಗಳಿಂದ ಹೊರಬರಲು ಬಹಳ ಪ್ರಯತ್ನ ಪಟ್ಟಿದ್ದೇನೆ, ಹೊರಬರಲು ಅಲ್ಲದಿದ್ದರೂ ಅವುಗಳನ್ನ ಅದುಮಿಡಲು. ರಾಜೇಶ್ ನನ್ನನ್ನ ಯಾವತ್ತಿಗೂ ಇಷ್ಟ ಪಡಲಿಲ್ಲ. ಅವಾಗಿಲ್ಲದ್ದು ಈಗ್ಯಾಕೆ? ಅವನಲ್ಲಿ ನನ್ನ ಬಗ್ಗೆ ಭಾವನೆಗಳಿವೇಯಾ? ಅಥವಾ ಅವನು ನನ್ನ ಜೊತೆ ಆಟವಾಡ್ತಿದಾನ?

ನಾನಿವತ್ತು ನಿರುಗೆ ಪ್ರೊಪೋಸ್ ಮಾದುವವಳಿದ್ದೆ. ಇವತ್ತು ನನ್ನ ಜೀವನದ ಮಹತ್ತರ ಘಳಿಗೆ ಆಗುವುದರಲ್ಲಿತ್ತು, ಆದ್ರೆ ಈ ರಾಜೇಶ್ ನನ್ನ ನಮ್ಮದಿಯನ್ನೇ ಕದಡಿಬಿಟ್ಟ. ರಾಜೇಶ್ ಹೇಳಿದ್ದು ಕೇಳಿ ನನಗೆ ಶಾಕ್ ಆಯ್ತು. ನಾನವನನ್ನು ಇಷ್ಟಪಡೋದಿಲ್ಲ ಅಂತ ಅಲ್ಲ, ಸುಮಾರು ವರ್ಷಗಳು ಕಳೆದಿವೆ ಅವನು ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ ಮತ್ತೆ ಈವಾಗ ನಿರು ನನ್ನ ಜೀವನದಲ್ಲಿದ್ದಾನೆ. ಈ ದಾರಿಯಲ್ಲಿ ನೀರು ಹರಿದು ಬಹಳ ಕಾಲವೇ ಆಗಿಹೋಗಿದೆ, ನಾನು ಅವನನ್ನ ಇಷ್ಟ ಪಡ್ತಿನಾ? ಗೊತ್ತಿಲ್ಲ. ಹಾಗೇನೇ ನಿರು ನನ್ನ ಜೊತೆ ಇರ್ತಾನ ಅನ್ನೋದು ಕೂಡ ನನಗೆ ಗೊತ್ತಿಲ್ಲ. ನಾನೀಗ ಗೊಂದಲದಲ್ಲಿದ್ದೇನೆ. ಓ ದೇವ್ರೇ ಸಹಾಯ ಮಾಡು. ನನಗೆ ದಾರಿ ತೋರ್ಸು. ಎಲ್ಲ ಕಷ್ಟ ಪರಿಹಾರ ಮಾಡೋ ಯಂತ್ರವನ್ನ ನೀನ್ಯಾಕೆ ಮಾಡ್ಲಿಲ್ಲ.

ದೇವ್ರು:
ಯಂತ್ರ? ಹ್ಹ ಹ್ಹ ಹ್ಹ!!! ಈ ಎಲ್ಲ ಸಾಫ್ಟವೇರ್ ಇಂಜಿನಿಯರ್ಗಳು ಹೀಗೆ ಇರ್ತಾರೆ. ಒಂದು ಯಂತ್ರ ಎಲ್ಲ ಕಷ್ಟಗಳಿಗೂ ಪರಿಹಾರ ಕೊಡುತ್ತೆ ಅಂತ ಅಂದುಕೊಂಡು ಬಿಟ್ಟಿದ್ದಾರೆ ಇವರು. ಆದ್ರೆ ಜೀವನ ಇಷ್ಟು ಸರಳವಾಗಿಲ್ಲ ಮಗು. ನಿಜಜೀವನ ಸಂಭಾಳಿಸಲು ನಿಜಕ್ಕೂ ಕ್ಲಿಷ್ಟಕರ. ನಿಮಗೆ ಗಣಿತದಲ್ಲಿ ೧+೧=೨. ಆದ್ರೆ ನಿಜ ಜೀವನದಲ್ಲಿ ೧+೧ ಕ್ಕೆ ಉತ್ತರ ೨ ಬಿಟ್ಟು ಏನಾದ್ರೂ ಆಗಬಹುದು. ಅದೇ ಜೀವನ. ಅದೇ ನನ್ನ ನಿಯಮ.

ಇನ್ನು ಯಂತ್ರದ ಬಗ್ಗೆ ಹೇಳೋದಾದ್ರೆ, ನಿಮ್ಮ ನಿಜ ಜೀವನದ ಕಷ್ಟಗಳನ್ನು ಎದುರಿಸಲು ನಾನದನ್ನು ನಿಮಗೆ ಕೊಟ್ಟಿದ್ದೇನೆ. ಕೆಲವರು ಅದನ್ನ ಹೃದಯ ಅಂತಾರೆ, ಮತ್ತೆ ಕೆಲವರು ಬುಧ್ಧಿ. ನಾನು ನಿಮಗೆ ಯೋಚಿಸೋಕೆ ಶಕ್ತಿ ಕೊಟ್ಟಿದ್ದೇನೆ. ನಿಮ್ಮ ಹಿಂದಿನ ಅನುಭವದ ಮೇಲೆ ನೀವು ನಿರ್ಧಾರಗಳನ್ನ ತಗೊತೀರ, ನಿಮ್ಮ ಮನಸಾಕ್ಷಿ ನಿಮಗೆ ನಿರ್ಧಾರಗಳನ್ನು ತಿಳಿಸುತ್ತದೆ. ನನಗೆ ನಂಬಿಕೆ ಇದೆ ಅವಳ ಖಂಡಿತ ಈ ಇಬ್ಬಂದಿಯ ಸ್ಥಿತಿ ಇಂದ ಹೊರಬರ್ತಾಳೆ ಅಂತ, ಯಾಕಂದ್ರೆ ಅವಳು ನಾನು ಶೃಷ್ಟಿ ಮಾಡಿರೋದನ್ನ ನಂಬೋಲ್ಲ ಆದ್ರೆ ನಾನು ನಂಬ್ತೀನಿ.

ದಿನಾಂಕ: ೨೪-ಮೇ
ಅವಳು:
ನಿನ್ನೆ ಬಹಳ ವರ್ಷಗಳ ನಂತರ ನಾನು ಅತ್ತೆ. ಅತ್ತೆ ಅತ್ತೆ ಅಳುತ್ತಾನೆ ಹೋದೆ. ನಾನು ಭಾವನೆಗಳ ಸಂಘರ್ಷದಲ್ಲಿ ಸಂಪೂರ್ಣ ಕಳೆದುಹೋಗಿದ್ದೆ. ನನಗೆ ಸರಿಯಾಗಿ ಆಗುತ್ತಿರಲಿಲ್ಲ. ನಾನೇನು ಮಾಡ್ಲಿ? ನಾನು ರಾಜೇಶನನ್ನ ಕೆಲವು ವರುಷಗಳ ಹಿಂದೆ ಪ್ರೀತಿಸುತ್ತಿದ್ದೆ, ಆದ್ರೆ ಅವ್ನು ನನ್ನ ಪ್ರೀತಿಸಲಿಲ್ಲ. ಆದ್ರೆ ಈಗ ಅವನು ನನ್ನ ಪ್ರೀತಿಸ್ತಾನೆ, ಆದ್ರೆ ನಾನು ನಿರುನ. ರಾಜೇಶ್ ಜೀವನದಲ್ಲಿ ಆರಾಮವಾಗಿರಬೇಕು ಅಂತ ಬಯಸ್ತಿದಾನೆ ಅದಕ್ಕೆ ನನ್ನ ಮದುವೆ ಆಗಬೇಕು ಅಂತಿದಾನೆ. ಆದ್ರೆ ನಿರು ಮುಂದಿನ ಜೀವನದ ಬಗ್ಗೆ ಯೋಚಿಸಿದ ಹಾಗೆ ಕಾಣುತ್ತಿಲ್ಲ, ಈಗ ಅವ್ನು ಎಂ ಬಿ ಎ ಮುಗಿಸುವುದರ ಕಡೆ ಲಕ್ಷ್ಯ ಕೊಡುತ್ತಿದ್ದಾನೆ, ಮುಂದೆಂದಾದ್ರು ಜೀವನದಲ್ಲಿ ನೆಲೆ ಹೊಂದುವ ಬಗ್ಗೆ ಯೋಚಿಸಬಹುದು. ರಾಜೇಶ್ ನನ್ನ ವಯಸ್ಸಿನವನು, ಬಹಳ ಸಮಚಿತ್ತ ಉಳ್ಳವನು; ಆದ್ರೆ ನಿರು ನನಗಿಂತ ಚಿಕ್ಕವನು ಸ್ವಲ್ಪ ತರ್ಲೆ ಅಂತ ಹೇಳಬಹುದು, ಆದ್ರೆ ಈ ವಯಸ್ಸಿಗೆ ಅದೇ ಶೋಭೆ. ನನ್ನ ಕುಟುಂಬದವರಿಗೆಲ್ಲ ರಾಜೇಶ್ ಗೊತ್ತು, ಅವನನ್ನ ನನ್ನ ಬಾಲ ಸಂಗಾತಿ ಮಾಡೋಕೆ ಅವರು ಸಂತೋಷಿಸುತ್ತಾರೆ, ಆದ್ರೆ ನಿರು, ಅವನ ಬಗ್ಗೆ ಅಪ್ಪನಿಗಾಗಲಿ ಅಮ್ಮನಿಗಾಗಲಿ ಏನು ಹೇಳಿಲ್ಲ.

ಆದ್ರೆ ನಿರುನ ನಾನು ಬಹಳ ಪ್ರೀತಿಸುತ್ತೇನೆ, ಬಹುಶಃ ನಾನು ಕಾಲೇಜಿನಲ್ಲಿ ರಾಜೇಶ್ನನ್ನು ಪ್ರೀತಿಸಿದ್ದಕ್ಕಿಂತ ಬಹಳ. ನಾನೀಗ ಹೇಗೆ ನಿರ್ಧಾರ ತಗೊಳ್ಲಿ? ನನ್ನ ಭಾವನೆಗಳ ಮೇಲಾ ಅಥವಾ ನನ್ನ ಭವಿಷ್ಯದ ದೃಷ್ಟಿಯಿಂದನಾ ? ನಾನೆಲ್ಲಿಗೆ ಹೋಗ್ಲಿ, ನನಗೆ ಹುಚ್ಚು ಹಿಡಿದ ಹಾಗೆ ಆಗ್ತಿದೆ? ಓ ದೇವ್ರೇ ಸಹಾಯ ಮಾಡಪ್ಪ. ನೀನು ನನಗೆ ಬೇಕು ಇವಾಗ. ಪ್ಲೀಸ್ ಪ್ಲೀಸ್ ದೇವ್ರೇ ಸಹಾಯ ಮಾಡೋ... ನನಗೆ ನಿರ್ಧಾರ ತಗೊಳ್ಳೋಕೆ ಸಹಾಯ ಮಾಡು.

ದಿನಾಂಕ:೩೦-ಮೇ
ಅವನು:
ಕಳೆದ ಕೆಲವು ದಿನಗಳು ನನಗೆ ಬಿರುಗಾಳಿಯಲ್ಲಿ ಹೊಯ್ದಾಡಿದಂತಹ ಅನುಭವ. ಕೆಲಸ ಬಿಡಲು ಬೇಕಾದ ಎಲ್ಲ ವ್ಯವಹಾರಗಳು ನನ್ನನ್ನ ಹೈರಾಣು ಮಾಡಿದವು. ಇಲ್ಲಿ ಹುಳದ ತರಹ ಬಿದ್ದು ಒದ್ದಾಡುವುದು ನನಗೆ ಬೇಕಿಲ್ಲ ಅದಕ್ಕೆ ನಾನು ಎಂ ಬಿ ಎ ಮಾಡೋಕೆ ಹೊರಟಿದೀನಿ. ಇನ್ನು ಕೆಲವೇ ದಿನಗಳು ನಾನು ನನ್ನ ಗುರಿಯನ್ನು ತಲುಪುವವನಿದ್ದೇನೆ.
ಆದ್ರೆ ಇಲ್ಲಿ ಒಂದು ದೊಡ್ಡ ಸಂಕಷ್ಟವಿದೆ, ನನಗೆ ಅವಳನ್ನು ಬಿಟ್ಟು ಹೋಗಲು ಮನಸಿಲ್ಲ, ಅವ್ಳು ನನ್ನ ಪ್ರೀತಿ, ನನ್ನ ಉಸಿರು. ನಾನವಳನ್ನು ನಿಜಕ್ಕೂ ಪ್ರೀತಿಸುತ್ತೇನೆ. ನನ್ನ ಭಾವನೆಗಳು ಪ್ರೀತಿಗೆ ತಿರುಗಿದ್ದು ನನಗೆ ಗೊತ್ತಾಗಲೇ ಇಲ್ಲ. ನನಗೆ ಅವಳನ್ನು ಬಿಟ್ಟಿರಲು ಮನಸಿಲ್ಲ ಹಾಗೇನೇ ನಾನು ಇಲ್ಲಿರೋಕೆ ಸಾಧ್ಯವಿಲ್ಲ. ನಾನು ಎಂ ಬಿ ಎ ಮಾಡ್ತಿರೋದು ಮುಂಬೈಯಲ್ಲೇ ಹೊರತು ಇಲ್ಲಲ್ಲ. ಇನ್ನು ೨-೩ ವರ್ಷ ನಾನು ಓದು ಮುಗಿಸಿ ಜೀವನದಲ್ಲಿ ನೆಲೆ ಕಂಡುಕೊಳ್ಳೋತನಕ ಅವ್ಳು ನನಗಾಗಿ ಕಾಯತಾಳ?
ನಾನೆಗ ಎಲ್ಲರಿಗು ವಿದಾಯ ಹೇಳ್ಬೇಕು, ಅದೇನು ದೊಡ್ಡ ಕಷ್ಟದ ಕೆಲಸವಲ್ಲ. ಆದ್ರೆ ಇದು ಅವಳ ಜೊತೆ ಹೇಳೋಕೆ ಆಗೋಲ್ಲ. ನಾನವಳಿಗೆ ಹೋಗೋದನ್ನ ಹೇಳ್ತಿನೋ ಇಲ್ಲೋ ಗೊತ್ತಿಲ್ಲ, ಹೇಗೆ ಅವಳಿಗೆ ವಿದಾಯ ಹೇಳ್ತೀನಿ ಅಂತ ನನಗೆ ಆತಂಕ ಶುರುವಾಗಿದೆ.

ಅವಳು:
ನಾನು ನನ್ನ ನಿರ್ಧಾರವನ್ನ ಮಾಡಿದ್ದೇನೆ. ಇದನ್ನ ಹೇಗೆ ತಿಳಿಸಬೇಕು ಅಂತ ನನಗೆ ಗೊತ್ತಿಲ್ಲ, ಆದ್ರೆ ಇದನ್ನ ತಿಳಿಸಲೇಬೇಕು. ಎರೆದರಲ್ಲಿ ಒಂದು ಹೃದಯ ಒಡೆದು ಹೋಗುತ್ತೆ ಅನ್ನೋದು ನನಗೆ ಗೊತ್ತು ಆದ್ರೆ ಇದನ್ನ ಬಿಟ್ಟು ಬೇರೆ ದಾರಿಯೇ ಇಲ್ಲ.ನಾನು ನನ್ನ ನಿರ್ಧಾರ ಮಾಡಿದ್ದೇನೆ ಮತ್ತು ಅದನ್ನೇ ಪಾಲಿಸ್ತೇನೆ. ಓ ದೇವ್ರೇ, ಎಲ್ಲ ಸಹಿಸಿಕೊಲ್ಲೋಕೆ ನನಗೆ ಶಕ್ತಿ ಕೊಡು.

ದಿನಾಂಕ: ೬-ಜೂನ್
ಅವಳು:
ಇವತ್ತು ನಿರುನ ಹುಟ್ಟಿದ ಹಬ್ಬ ಮತ್ತು ಇಲ್ಲಿ ಇದು ಅವನ ಕೊನೆಯ ದಿನ. ಇವತ್ತು ಸಾಯಂಕಾಲ ಅವನು ಮುಂಬಯಿಗೆ ಹೋದ. ಅವನಿಂದ ದೂರ ಆಗಬೇಕಾದರೆ ನನ್ನ ಮನಸ್ಸೇ ಒಡೆದು ಹೋಯಿತು. ಬಹುಶಃ ಭವಿಷ್ಯದಲ್ಲಿ ನಾವು ಒಬ್ಬರನ್ನೊಬ್ಬರು ನೋಡಲಿಕ್ಕಿಲ್ಲ ಅನ್ನೋ ಸತ್ಯ ನಮ್ಮಿಬರಿಗೆ ಅರಿವಾದಾಗ ನನಗೆ ಈ ಪ್ರಪಂಚವೇ ಬೇಡ ಅನ್ನಿಸಿಬಿಟ್ಟಿತು. ನಾನಾಗಲೇ ನಿರ್ಧಾರ ಮಾಡಿಯಾಗಿತ್ತು, ತೊಂದ್ರೆ ಅಂದ್ರೆ ಅದನ್ನ ಅವನಿಗೆ ಹೇಗೆ ತಿಳಿಸಬೇಕು ಅನ್ನೋದು. ನಾನು ವಸ್ತು ನಿಷ್ಟವಾಗಿ ವರ್ತಿಸಬೇಕೆಂದುಕೊಂಡೆ. ಹುಟ್ಟಿದ ಹಬ್ಬದ ದಿನ ಅಪ್ತೆಷ್ಟರು ಉದುಗೊರೆಗಳನ್ನ ಕೊಟ್ಟರೆ ನಾನು ಅವನಿಗೆ ಒಂದು ಭಯಂಕರ ಸುದ್ದಿಯನ್ನ ಹೇಳಿದೆ. ಅದು ನಿಜಕ್ಕೂ ಭಯಂಕರ. ಇದನ್ನ ಕೇಳಿ ಅವನು ಏನನ್ನು ಹೇಳಲಿಲ್ಲ, ಅವನ ಬಾಯಲ್ಲಿ ಬಂದದ್ದು congrats ಮತ್ತು good luck ಅನ್ನೋ ಪದಗಳು ಮಾತ್ರ. ಆದ್ರೆ ಅವನ ಮುಖ ಅವ್ನು ಏನು ಹೇಳಬೇಕಾಗಿತ್ತೋ ಏಳವನ್ನು ಸ್ಪಷ್ಟವಾಗಿ ಹೇಳ್ತು. ನಾನು ಎಲ್ಲರ ಮಧ್ಯ ಈದಿನಿ ಅನ್ನೋ ಪರಿವೆಯೇ ಇಲ್ಲದೆ ಜೋರಾಗಿ ಅಳೋಕೆ ಶುರುಮಾಡಿಬಿಟ್ಟೆ. ಬಂದಿದ್ದ ಸ್ನೇಹಿತರೆಲ್ಲ ನನ್ನನ್ನೇ ನೋಡುತ್ತಾ ನಿಂತುಬಿಟ್ಟರು. ಅವನು ಅಳಲಿಲ್ಲ ನಿಜ ಆದ್ರೆ ಅವಕಾಶ ಇದ್ದಿದ್ರೆ ಅವ್ನು ನಿಂತಲ್ಲೇ ನೀರಗುತ್ತಿದ್ದನು, ಅದು ಅವನ ಕನ್ನಚಿನಲ್ಲೇ ಕಾಣಿಸುತ್ತಿತ್ತು.

ನಿನ್ನ ಬದಲು ರಾಜೇಶನನ್ನ ಆರಿಸಿಕೊಂಡಿದ್ದಕೆ ಕ್ಷಮೆ ಕೇಳ್ತೀನಿ ಅಂದಾಗ. ಅವನ ಉತ್ತರ ಕೇಳಿ ನಾನು ದಂಗಾಗಿಹೋದೆ. ಅವನು ಹೇಳಿದ್ದು "ನೀನು ಕ್ಷಮೆ ಕೇಳಬೇಕಾಗಿಲ್ಲ, ಇದು ನಿನ್ನ ಜೀವನ ನಿನಗೆ ಯಾರನ್ನ ಬೇಕಾದ್ರೂ ಆರಿಸಿಕೊಳ್ಳುವ ಸ್ವಾತಂತ್ಯ್ರ ನಿನಗಿದೆ ಮತ್ತು ಅದನ್ನು ಮಾಡುವಷ್ಟು ದೊಡ್ದವಳಾಗಿದ್ದಿಯ ಮತ್ತು ನೀನು ಸರಿಯಾದ ನಿರ್ಧಾರವನ್ನೇ ಮಾಡಿದ್ದಿಯ. ನಾವು ಸ್ನೇಹಿತರಾಗಿದ್ದೆವು ಸ್ನೇಹಿತರಾಗೆ ಇರೋಣ, ಆದ್ರೆ ನಿನ್ನ ಜೊತೆ ಸಂಪರ್ಕದಲ್ಲಿರು ಅಂತ ಮಾತ್ರ ಹೇಳಬೇಡ. ನಾನಿನ್ನ ಪ್ರೀತಿಸಿದೆ, ನಿಜಕ್ಕೂ ಮನದಾಳದಿಂದ ಪ್ರೀತಿಸಿದೆ. ನಾನು ಯಾವಾಗಲು ನಿನ್ನ ಬಗ್ಗೆ ಯೋಚಿಸಿದರೆ ನಿನ್ನ ಪ್ರೀತಿ ಬಿಟ್ಟು ನನ್ನ ಕಣ್ಣಮುಂದೆ ಏನು ಬರೋಲ್ಲ ನಿನಗೂ ಕೂಡ ಹಾಗೆ ಆಗುತ್ತೆ ಅಂತ ಅಂದುಕೊಂಡಿದಿನಿ. ನಿನ್ನ ಬಗ್ಗೆ ಇನ್ನು ಯೋಚಿಸೊಲ್ಲ ಅದು ನೀನು ಮದುವೆ ಆದ ಮೇಲೆ ಕೂಡದು. so ಇದು ನಮ್ಮ ಕೊನೆಯ ಭೇಟಿ. ನಿನಗೆ ಧ್ಯನವಾದಗಳು ಈ ನಿನ್ನ ಸ್ನೇಹಕ್ಕೆ ಮತ್ತು ಪ್ರೀತಿ ಅನ್ನೋ ಮಧುರ ಭಾವನೆಯನ್ನ ನನ್ನ ಮನಸ್ಸಿನಲ್ಲಿ ಯುಮ್ಬಿ ಕೊಟ್ಟಿದಕ್ಕೆ. ನಿನ್ನ ಮುಂದಿನ ಜೀವನಕ್ಕೆ best of ಲಕ್. " ಹೀಗೆ ಹೇಳಿ ಅವನು ಬಸ್ಸಿನಲ್ಲಿ ಹತ್ತಿ ಕುಳಿತುಬಿಟ್ಟ.

ಅವನಿಗೆ ನಿಜಕ್ಕೂ ಆ ಅನಿಸಿಕೆ ಇದೇನಾ ಅಥವಾ ನನ್ನ ನೋವು ಹೆಚ್ಚು ಮಾಡೋದು ಬೇಡ ನಟ ಆತರಹ ಹೇಳಿ ಹೋದ್ನ? ಇಷ್ಟು ದಿನ ನಾನು ನಿರು ಜೊತೆ ಇದ್ರೂ ಕೂಡ ಅವನನ್ನ ಸಂಪೂರ್ಣವಾಗಿ ಅರ್ಥ ಮಾಡ್ಕೊಳ್ಳೋಕೆ ಆಗ್ಲಿಲ್ಲ ಅನ್ನಸ್ತುತ್ತೆ. ಏನೇ ಇರಲಿ ನಿರು ನಿನ್ನ ಪ್ರೀತಿಸಿದ್ದು ನಿಜ. ಪ್ರಪಂಚದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನನ್ನ ಪ್ರೀತಿಸಿದೆ. ಆದ್ರೆ ನನ್ನ ನಿರ್ಧಾರ ನನ್ನ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ತಗೆದು ಕೊಂಡಿದ್ದಾಗಿದೆ. ನನ್ನ ನಿರ್ಧಾರ ನಮ್ಮಿಬರಿಗೂ ಒಳ್ಳೆಯದನ್ನ ಮಾಡುತ್ತೆ ಅನ್ನೋ ನಂಬಿಕೆ ನನಗೆ ಖಂಡಿತಾ ಇದೆ. ನಾನು ಈ ಡೈರಿ ಯನ್ನು ನಿನ್ನ ನೋಡಿದ ದಿನದಿಂದ ಬರೆಯಲು ಶುರು ಮಾಡಿದೆ, ಆದ್ರೆ ಇವಾಗ ನೀನೆ ನನ್ನ ಜೀವನದಲ್ಲಿ ಇಲ್ಲ, ನಾನು ಇದನ್ನ ಬರೆಯುವುದನ್ನು ನಿಲ್ಲಿಸುತ್ತೇನೆ. ಇದು ನನ್ನ ಡೈರಿಯ ಕೊನೆಯ ಹಾಳೆಯಾಗಲಿದೆ. ನಿರು ನಿನ್ನ ಭವಿಷ್ಯಕ್ಕೆ ನನ್ನ best of luck. i love you, love you, love you.......... bye bye Bbye.....

ಅವನು:
ಇದು ನನ್ನ ಜೀವನದ ಅತ್ಯಂತ ಕೆಟ್ಟ ಹುಟ್ಟಿದ ಹಬ್ಬ, ಇವತ್ತು ನಾನು ನನ್ನ ಪ್ರೀತಿಯನ್ನ ಮುರಿದುಕೊಂಡ ದಿನ. ಅದನ್ನ ಮುರಿದುಕೊಂಡೆ ಅಂದ್ರೆ ತಪ್ಪಾಗುತ್ತೆ, ನಾವಿಬ್ಬರು ಬೇರೆ ಆದ್ವಿ; ಈ ಅಗಲುವಿಕೆ ನಿರಂತರ, ಇನ್ನೊಬ್ಬರ ರೇಖೆಯನ್ನು ಇನ್ನೆಂದು ತುಳಿಯುವುದಿಲ್ಲ ಅನ್ನೋ ಆಣೆಯೊಂದಿಗೆ. ನನಗೆ ಅವಳನ್ನ ನೋಡಿ ಅಳಬೇಕು ಅಂತ ಅನ್ನಿಸಿತು; ಆದ್ರೆ ಹುಡುಗರು ಅಳ್ತಾರ? ಹೌದು ಅಳ್ತಾರೆ, ಆದ್ರೆ ಗುಟ್ಟಾಗಿ... ಇವಾಗ ನಾನು ಅಳೋ ತರಹ. ಈ ಹಾಳೆ ಪೂರ ನನ್ನ ಕಣ್ಣಿರಿನಿಂದ ನೆನೆದು ಹೋಗಿದೆ. ಏನೇ ಇರ್ಲಿ ಇದು ನನ್ನ ಕೊನೆಯ ಹಾಳೆ. ಇನ್ನು ಮುಂದೆ ಡೈರಿ ಬರೆಯಬಾರದು ಅಂತ ನಿರ್ಧಾರ ಮಾಡಿದ್ದೇನೆ. ಈ ದೈರ್ಯನ್ನ ಬರೆಯೋಕೆ ಶುರು ಮಾಡಿದ್ದೆ ನನಗೆ ಸೆಕ್ರೆಟರಿ ಸಿಕ್ಕ ಮೇಲೆ ಆದ್ರೆ ಈಗ ಅವಳೇ ನನ್ನ ಜೊತೆಗಿಲ್ಲ, ಇನ್ನು ಡೈರಿ ಬರೆದು ಏನು ಪ್ರಯೋಜನ? ಹುಡುಗಿ ನಿನ್ನ ಬಾಳ ಹಾದಿ ಸದಾ ನಗುವಿನಲ್ಲಿ ಸಾಗಲಿ. I Love You. Bye.....
ಕೊನೆಯ ಭಾಗ:
ರಾಜೇಶ್:
ಕೊನೆಗೂ, ಇವತ್ತು ನನ್ನ ಬಾಳಿನ ಅದೃಷ್ಟದ ದಿನ. ಅವಳು ಹ್ಞೂ ಅಂತ ಹೇಳಿದ್ಲು. ನನಗೆ ತುಂಬ ಸಂತೋಷ ಆಗ್ತಿದೆ. ಅವಳು ನನ್ನವಳು. ನನ್ನ ಕನಸು ಸಾಕಾರಗೊಂಡಿದೆ. ಓ ದೇವ್ರೇ ನಿನಗೆ ಕೋಟಿ ವಂದನೆ. ಕೇವಲ ಕೆಲವೇ ಜನ ತಾವು ಪ್ರೀತಿಸಿದವರ ಜೊತೆ ಇರೋ ಅದೃಷ್ಟ ಪಡಿತಾರೆ; ನಾನು ಅಂತಹ ಅದೃಷ್ಟಶಾಲಿಗಳಲ್ಲಿ ಒಬ್ಬ. ನನ್ನ ಸಂತೋಷಕ್ಕೆ ಮೇರೆಯೇ ಇಲ್ಲ. ನಾನಿವತ್ತು ತುಂಬ ಖುಷಿಯಾಗಿದ್ದೇನೆ.

ನಿರು ಇವತ್ತು ಕಂಪನಿ ಬಿಟ್ಟು ಹೋದ. ಮುಂದೆ ಭವಿಷ್ಯದಲ್ಲಿ ಮತ್ತೆ ಸಿಗ್ತಿವಾ? ಗೊತ್ತಿಲ್ಲ. ನಾನು ಅವನನ್ನ ಹಾರೈಸಿ ಬೀಳ್ಕೊಡಲು ಹೋಗಿದ್ದೆ. ಅವನು ಅವಳ ಜೊತೆ ಮಾತ್ನಾಡ್ತಿದ್ದ. ನನಗೆ ಅವಳ ಮುಖ ಕಂಡಾಗ, ನನ್ನ ಮನಸಿನಲ್ಲಿ ಏನೋ ದುಃಖದ ಅನುಭವ. ಅವರಿಬ್ಬರ ಮದ್ಯ ಏನಾದ್ರೂ ಇದೇನಾ? ಇದ್ರೆ ಅವಳು ನನಗೆ ಹ್ಞೂ ಅಂತ ಯಾಕೆ ಹೇಳಿದ್ಲು? ಅವರಿಬ್ರು ಸೇರಿ ನನ್ನಿಂದ ಏನಾದ್ರೂ ಮುಚ್ಚಿಡೋಕೆ ಪ್ರಯತ್ನ ಪಡ್ತಿದಾರ? ಅಥವಾ ಅವರಿಬ್ಬರ ಮಧ್ಯೆ ನಾನು ಅಡ್ಡವಾಗಿ ಇದ್ದಿನಾ? ಅವಳಿಂದ ದೂರ ಸರಿಯುವಾಗ ನಿರುನ ಕಣ್ಣಲ್ಲಿ ನಾನು ಕಣ್ಣಿರು ನೋಡಿದೆ, ಅವ್ನು ಹಾಗೆ ಬಸ್ಸು ಹತ್ತಿಬಿಟ್ಟ. ಅವಳ ಸ್ಥಿತಿ ಏನು ಭಿನ್ನವಾಗಿರಲಿಲ್ಲ, ಅವಳು ನಿಜಕ್ಕೂ ಜೋರಾಗಿ ಅತ್ತುಬಿಟ್ಟಳು. ಕೆಲವು ನಿಮಿಷಗಳ ನಂತರ ಅವಳು ಸಹಜ ಸ್ಥಿತಿಗೆ ಬಂದಳು ಆದ್ರೆ ಅವಳ ನೋಟ ಶೂನ್ಯವನ್ನು ದಿಟ್ಟಿಸುತ್ತಿತ್ತು. ಅವಳ ಮುಖ ಕಣ್ಣಿರನ್ನು ತಡೆ ಹಿಡಿಯುವ ವ್ಯರ್ಥ ಪ್ರಯತ್ನವನ್ನ ಸಾರಿ ಹೇಳುತ್ತಿತ್ತು. ಓ ದೇವ್ರೇ ನನಗೆ ದಾರಿ ತೋರ್ಸು, ನಾನು ಅವಳಿಗೆ ಪ್ರೊಪೋಸ್ ಮಾಡಿ ತಪ್ಪು ಮಾಡ್ಲಿಲ್ಲ ಅಂದುಕೋತೀನಿ.

ಅವರು ಮಾತನಾಡುತ್ತಿದ್ದ ರೀತಿ ನೋಡಿದ್ರೆ ಅವರೇನು ಜಗಳ ಆಡಿರಲಿಲ್ಲ ಅನ್ನಿಸುತ್ತೆ. ಆದ್ರೆ ಮತ್ತೆ ಬೇರೆ ಏಕಾದ್ರು ? ಅಥವಾ ಅವರಿಬ್ಬರ ನಡುವೆ ಭಾವನೆಗಳಿದ್ದು ಅದನ್ನ ತೋರಿಸಿಕೊಳ್ಳೋಕೆ ಇಷ್ಟ ಪಡಲಿಲ್ಲವೋ? ಏನೇ ಇರಲಿ ಅವಳು ನನ್ನ ಪ್ರೀತಿ ಒಪ್ಪಿಕೊಂಡಿದಾಳೆ; ಯಾವುದೇ ಕಾರಣಕ್ಕೆ ಇರಬಹುದು; ಆದ್ರೆ ಈಗ ನನ್ನವಳು. ನಿರು ಅವಳ ಭೂತ ಕಾಲ. ಅವಳು ಅವನನ್ನ ಮರೆಯುತ್ತಾಳೆ ಕೂಡ. ಮರೆಯಲೇ ಬೇಕು. ಏನೇ ಇರಲಿ ನಾನವಲ್ಲನ್ನು ಪ್ರೀತಿಸುತ್ತೇನೆ ಅಷ್ಟೆ.

ದೇವರು:
ಸರಿ. ಇದು ಈ ಕಥೆಯ ಅಂತ್ಯ, ವಿಷೆಶವಾದದ್ದೇನು ಅಲ್ಲ; ಇದು ಎಲ್ಲ ಇತರೆ ಕಥೆಗಳಂತೆಯೇ. ಕೊನೆ ಘಳಿಗೆಯಲ್ಲಿ ನಾನು ನಡುವೆ ಬಂದು ಈ ಕಥೆಯ ಕೊನೆಯನ್ನು ಬದಲ್ಲಯಿಸುತ್ತೇನೆ ಅಂದುಕೊಂಡ್ರ?
ಬಸ್ಸು ಇನ್ನೇನು ಹೊರಡುತ್ತೆ ಅಂದಾಗ ಅವಳು ಓಡಿ ಹೋಗಿ ಬಸ್ಸು ಹತ್ತಿ ನಿರುನ ಜೊತೆ ಮುಂಬಯಿಗೆ ಹೋಗ್ತಾಳೆ ಅಥವಾ ನಿರು ಜಿಗಿದು ಬರ್ತಾನೆ ಅಥವಾ ರಾಜೇಶ್ಗೆ ಏನೋ ಇದೆ ಅಂತ ಅನ್ನಿಸಿ ಬೈಕಿನಲ್ಲಿ ಅವಳನ್ನ ಕೂಡಿಸಿಕೊಂಡು ಬಸ್ಸನ್ನ ಹಿಂಬಾಲಿಸಿ ಅವಳನ್ನ ನಿರು ಜೊತೆ ಕಳಿಸಿಕೊಡ್ತಾನೆ? ಹೀಗೆ? ಇಲ್ಲ. ಇದೇನು ಚಲನಚಿತ್ರ ಅಲ್ಲ. ಇದೇನು ರೀಲ್ ಕಥೆ ಅಲ್ಲ ರಿಯಲ್ ಕಥೆ.
ಅವಳು ಈ ನಿರ್ಧಾರವನ್ನ ಪ್ರತಿಯೊಂದು ಸನ್ನಿವೇಶವನ್ನು ತೂಗಿ ಅಳೆದು ತಗೆದುಕೊಂದಿದ್ದಾಳೆ. ನಾನೀಗ ಅಡ್ಡ ಹೋದರೆ ಅನ್ಯಾಯ ಮಾಡಿದಂತೆ. ನಾನು ಇದನ್ನು ಬದಲಾಯಿಸಿದರೆ ಅವಳ ಆಯ್ಕೆ ತಪ್ಪು ಅನ್ನೋ ನಿರ್ಧಾರ ಮಾಡಿದ ಹಾಗಲ್ವ? ಇದು ನಾನು ಮೋಸ ಮಾಡಿ ಹಾಗೆ ಅಲ್ವ? ಯಾವುದೇ ಕಾರಣ ಇಲ್ಲದೆ ಇತರರ ಕೆಲಸಗಳನ್ನು ಮಾಡಲು ಬರುವುದಿಲ್ಲ. ಅಲ್ಲವೇ?
ಮುಂಚೆನೇ ಹೇಳಿದ ಹಾಗೆ ನಾನು ಈ ಜಗತ್ತನ್ನ ಕೆಲವು ಸೂತ್ರಗಳ ಮೇಲೆ ಮಾಡಿದ್ದೇನೆ. ಈ ಪ್ರಪಂಚದ ಸಮತೋಲನ ದಿನ ನಿತ್ಯ ನಡೆಯುವ ಇಂತಹ ಘಟನೆಗಳ ಮೇಲೆ ಅವಲಂಬಿತ. ಯಾವುದೇ ಕ್ರಿಯೆ ಹೆಚ್ಚು ಅಥವಾ ಕಡಿಮೆ ಅಲ್ಲ. ಪ್ರತಿ ಕ್ಷಣ, ಸನ್ನಿವೇಶ, ಕ್ರಿಯೆಗೂ ಒಂದು ನಿರ್ಧಿಷ್ಟ ಕಾರಣವಿದೆ. ಅದು ನೇರವಾಗಿ ಪಾಲ್ಗೊಳ್ಳದೆ ಇದ್ರೂ ಅದರ ಪರಿಣಾಮ ಅನುಭವಕ್ಕೆ ಬರುತ್ತದೆ. ಮುಂಚೆ ಹೇಳಿದ ಹಾಗೆ ನಾನು ಮಧ್ಯ ಪ್ರವೇಶಿಸದೇ ನನ್ನ ಮಾತು ಉಳಿಸಿಕೊಂಡಿದ್ದೇನೆ. ಈಗ ನೀವು ಹೇಳಬಹುದು ಎಲ್ಲರ ಹಣೆಬರಹ ನಿರ್ಧರಿಸುವವ ನಾನೇ ಅಂತ. ಅದು ನಿಜ, ನಿತ್ಯನೂತನ. ಅಲ್ಲೇ ಒಳಗುಟ್ಟು ಇರುವುದು. ಅವಳು ರಾಜೇಶ್ ಜೊತೆ ಇರಬೇಕು ಅಂತ ನಿರ್ಧರಿಸಿದವ ನಾನೇ. ಅಷ್ಟೆ. ನಿಮಗೆ ಅರ್ಥ ಆಗುತ್ತೆ ಅಂತ ಅಂದುಕೊಂಡಿದಿನಿ. in fact ನಿಮಗೆ ಅರ್ಥ ಆಗೇ ಆಗುತ್ತೆ.... ಮತ್ತೆ ಅದೇ ನಿಮ್ಮ ಹಣೆ ಬರಹ ಏನು ಹೇಳುತ್ತೋ .....
-------------------------------------------------------------------------------------------------------------
ಇಷ್ಟು ದಿನ ಈ ಬರಹ ಸಹಿಸಿ ಕೊಂಡಿದ್ದಕ್ಕೆ ಧನ್ಯವಾದಗಳು (ನನ್ನಿ) Smiling

ಡೈರಿಯ ಕೆಲವು ಹಾಳೆಗಳು - ಭಾಗ ೧೧

ದಿನಾಂಕ:೧೦-ಮಾರ್ಚ್
ಅವನು: ರಾಜೇಶ್ ನಮ್ಮನ್ನು ಭೇಟಿ ಮಾಡಿಸಿದ ದಿನದಿಂದ ನನ್ನ ದಿನಗಳು ತುಂಬ ಚೆನ್ನಾಗಿ ಸಾಗುತ್ತಿವೆ. ನಾನೇನು ಅವಳನ್ನ ದಿನಾ ಮಾತನಾಡಿಸುತ್ತಿಲ್ಲ, ಆದ್ರೆ ಕನಿಷ್ಠ ನಮ್ಮಿಬ್ಬರ ನಡುವೆ ನಗು ವಿನಿಮಯ ಆಗುತ್ತಿದೆ. ನನ್ನ ನೋಡಿದಾಗಲೆಲ್ಲ ಅವಳು ಮುಗುಳ್ನಗೆ ಸೂಸುತ್ತಾಳೆ. ಅವಳ ಪಕ್ಕದಲ್ಲಿ ಕೂತು ಮನಸ್ಸು ಬಿಚ್ಚಿ ಮಾತನಾಡೋ ಅವಕಾಶ ಯಾವಾಗ ಬರುತ್ತೋ ಅಂತ ಕಾಯುತ್ತಿದಿನಿ.

ದಿನಾಂಕ:೧೨-ಮಾರ್ಚ್
ಅವನು:
ಇವತ್ತು ಕಚೇರಿಯಿಂದ ವಾಪಸ್ಸು ಬರುವಾಗ ಅವಳ ಪಕ್ಕದಲ್ಲೇ ಕುಳಿತುಕೊಂಡೆ!!! Smiling. ಯಾವುದೇ ಒಂದು ಸ್ಪಷ್ಟ ವಿಷಯದ ಬಗ್ಗೆ ಮಾತನಾಡದಿದ್ದರು, ತುಂಬಾ ಹೊತ್ತು ಮಾತನಾಡಿದ್ವಿ, ಅವಳ ಕಂಪನಿ ನನಗೆ ತುಂಬಾ ಹಿತ ಅನ್ನಿಸ್ತು. ಅವಳು ನಿಜಕ್ಕೂ ಮದ್ದುಗಿದ್ದಾಳೆ, ಸರಳ ಮತ್ತು ಒಳ್ಳೆಯ ಹುಡುಗಿ. ಅವ್ಳು ನಾಳೆ ನನಗಾಗಿ ಒಂದು ಜಾಗ ಜಾಗ ಹಿಡಿಯುವುದಾಗಿ ಹೇಳಿದ್ಲು. ನೋಡೋಣ ಅವ್ಳು ತನ್ನ ಮಾತು ಉಳಿಸಿಕೊಳ್ತಾಳ ಅಂತ ......

ದಿನನಕ:೧೬-ಮಾರ್ಚ್
ಅವನು: ಕಳೆದ ಕೆಲವು ದಿನಗಳಿಂದ ಅವ್ಳು ನನಗಾಗಿ ಬೆಳೆಗ್ಗೆ ಮತ್ತು ಸಾಯಂಕಾಲ ತನ್ನ ಪಕ್ಕದಲ್ಲಿ ಜಾಗ ಹಿಡಿತಿದಾಳೆ. ನಮ್ಮಿಬ್ಬರಿಗೂ ಪರಸ್ಪರರ ಸಂಗ ಹಿತವೆನ್ನಿಸುತ್ತಿದೆ. ಇವತ್ತು ಧೈರ್ಯ ಮಾಡಿ ಒಂದು ಹೆಜ್ಜೆ ಮುಂದಿಟ್ಟೆ. ಅವಳನ್ನ ಇವತ್ತು ಮಧ್ಯಾನ ಕಾಫೀಗೆ ಕರೆದೆ. ನನಗೆ ಅವಳು ಏನು ಹೇಳ್ತಾಳೋ ಅನ್ನೋ ಘಾಭರಿ ಮನಸಿನ್ನಲ್ಲಿ ತುಂಬಿತ್ತು ಆದ್ರೆ ಅವ್ಳು ಒಂದು ಕ್ಷಣ ಕೂಡ ಯೋಚನೆ ಮಾಡದೆ ಸಮ್ಮತಿ ಸೂಚಿಸಿದಳು. ಅವಳ ಮುಖಭಾವ ಹೇಗಿತ್ತೆಂದರೆ ಅವಳು ನನ್ನಿಂದ ಇಂತಹ ಒಂದು ನಡೆಯನ್ನ ಅಪೇಕ್ಷಿಸುತ್ತಿದ್ದಳು ಅನ್ನೋ ತರಹ ಇತ್ತು.
ಸಾಯಂಕಾಲ ೪ ಘಂಟೆಗೆ ನಮ್ಮ ಕ್ಯಾಂಪಸ್ನಲ್ಲಿರುವ ಕೆಫೆ ನಲ್ಲಿ ಸಿಗುವುದು ಅಂತ ನಿಶ್ಚಯವಾಯಿತು.

ಆದ್ರೆ ಇವತ್ತು ಸಾಯಂಕಾಲ ಅವಳು ಬರಲಿಲ್ಲ. ಯಾಕೆ ಹೀಗೆ ಮಾಡ್ದೆ ಅಂತ ಕೇಳೋಣ ಅಂದ್ರೆ ನನ್ನ ಹತ್ತಿರ ಅವಳ ಮೊಬೈಲ್ ಸಂಖ್ಯೆ ಇಲ್ಲ. ಇಡಿ ಸಾಯಂಕಾಲ ಒಬ್ಬನೇ ಅವಳಿಗಾಗಿ ಕಾಯೋದಕ್ಕೆ ತುಂಬಾ ಮುಜುಗರ ಅನ್ನಿಸ್ತು. ಅವಳು ಇದನ್ನ ಬೇಕು ಅಂತಲೇ ಮಾಡಿದ್ಲಾ? ಯಾಕೆ? ನನಗೆ ಯಾವುದೇ ಸರಿಯಾದ ಕಾರಣ ಸಿಗುತ್ತಿಲ್ಲ.
ಅಕಸ್ಮಾತ್ ಅವಳಿಗೆ ಏನಾದ್ರೂ ಕೆಲಸ ಅಥವಾ ಮೀಟಿಂಗ್ ಇದ್ರೆ ನನಗೆ ಕರೆಮಾಡಿ ತಿಳಿಸಬಹುದಿತ್ತು. ನನ್ನ ದೂರವಾಣಿ ಟೆಲೆಫೋನ್ ಡೈರೆಕ್ಟರಿಯಲ್ಲಿ ಸಿಗುತ್ತಿತ್ತು. ನಾನು ಯಾರನ್ನು ಕೇರ್ ಮಾಡಲ್ಲ ಮತ್ತು ತಾನೆಷ್ಟು ಮುಖ ಅಂತ ತೋರಿಸ್ಕೊಳ್ಳೋಕೆ ಈ ತರಹ ಮಾಡಿದ್ಲಾ?

ಅವಳು:
ಇವತ್ತು ನಿಜಕ್ಕೂ ಒಂದು ದೊಡ್ಡ ವಿಕೊಪವಾಯಿತು. ನಮ್ಮ ಸರ್ವರ್ ಗಳೆಲ್ಲ ಕೆಟ್ಟುಹೊಗಿದ್ದವು. ಅದರಲ್ಲಿದ್ದ ಮಾಹಿತಿ ಮತ್ತು ದತ್ತಾಂಶವನ್ನು ಉಳಿಸಿಕೊಳ್ಳಲು ಹೆಣಗಾದುತ್ತಿದೆವು. ಇವತ್ತು ನಿರು ಜೊತೆ ನನ್ನ ಮೊದಲೇ "ಡೇಟ್" ಇತ್ತು ಅನ್ನೋದು ನನಗೆ ಸಂಪೂರ್ಣ ಮರೆತು ಹೋಯ್ತು. ಮಧ್ಯಾನ ೨ ಗಂಟೆಗೆ ಮೀಟಿಂಗ್ ಹೋಗುವ ಮುಂಚೆ ನೆನಪು ಮಾಡಿಕೊಂಡೆ. ಸಂಜೆ ೪ರ ಹೂತಿಗೆ ಮೀಟಿಂಗ್ ಮುಗಿಯುತ್ತೆ, ಆಮೇಲೆ ನಿರುನ ಆರಾಮವಾಗಿ ಭೇಟಿಯಾಗಬಹುದು ಅಂತ ಅಂದ್ಕೊಂಡು ಹೋದೆ, ಆದ್ರೆ ಆಗಿದ್ದೆ ಬೇರೆ. ಆದ್ರೆ ವಿಧಿಯದು ಬೇರೆಯದೇ ಹಂಚಿಕೆ ಇತ್ತು ಅಂತ ಕಾಣಿಸುತ್ತೆ ೫ ಘಂಟೆ ಆದರು ಮೀಟಿಂಗ್ ಮುಗಿಯಲಿಲ್ಲ, ನಿರುಗೆ ಕರೆ ಮಾಡಿ ನಾನು ಬರೋಕೆ ಆಗಲ್ಲ ಅಂತ ತಿಳಿಸೋಕೆ ಕೂಡ ಆಗಲಿಲ್ಲ. ಮೀಟಿಂಗ್ ಮುಗಿದಾಗ ಸಂಜೆ ೬. ಅವ್ನು ಇವಾಗ ಮನೆಗೆ ಹೋಗಿರ್ತಾನೆ. ಇವತ್ತು ಅವ್ನು ಮುಂಬಯಿಗೆ ಹೋಗುವವನಿದ್ದ, ಇವತ್ತು ಕಚೇರಿಯಿಂದ ಬೇಗೆ ಬಿಟ್ಟಿರ್ತಾನೆ.

ನಾನೇನು ಮಾಡ್ಲಿ? ಅವನನ್ನ ಮುಖಾ ಮುಖಿ ಭೇಟಿ ಆಗಿ ಕ್ಷಮೆ ಕೇಳ್ಬೇಕು ಅಂತ ಇದ್ದೆ. ಸಂದೇಶ ಅಥವಾ ಕರೆ ಮಾಡಿ ಕ್ಷಮೆ ಕೇಳಿದ್ರೆ ಸರಿಯಾಗಿ ಇರೋಲ್ಲ. ಸೋಮುವಾರ ನಾವು ಮತ್ತೆ ಭೇಟಿಆಗ್ತಿವಿ. ಆಗ ಅವ್ನಿಗೆ ನಡೆದದ್ದೆಲ್ಲ ತಿಳಿಸ್ತೀನಿ. ಅವ್ನು ತುಂಬಾ ಒಳ್ಳೆಯ ಹುಡುಗ. ಅವನಿಗೆ ನನ್ನ ಸ್ಥಿತಿ ಅರ್ಥ ಆಗುತ್ತೆ. ಹಾಗಂತ ಭಾವಿಸ್ತೀನಿ. ಸೋಮವಾರದ ತನಕ ನನಗೆ ಕಾಯದೆ ಬೇರೆ ದಾರಿ ಇಲ್ಲ.

ದಿನಾಂಕ:೧೯-ಮಾರ್ಚ್
ಇವತ್ತು ನಾನು ಸಾಯಂಕಾಲ ೬ಕ್ಕೆ ಕಚೇರಿ ಬಿಟ್ಟೆ. ಮುಂಬಯಿಯ ಪ್ರಯಾಣ ನನ್ನ ಹಿಂದಿ ಹಿಪ್ಪೆ ಮಾಡಿತ್ತು, ನನಗೆ ಸ್ವಲ್ಪ ವಿಶ್ರಾಂತಿ ಬೇಕಾಗಿದ್ದರಿಂದನಾ ಅಥವಾ ಅವಳ ಜೊತೆ ೮ ಗಂಟೆಯ ಬಸ್ಸಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲೋ? ನನಗೆ ಕಾರಣ ಗೊತ್ತಿಲ್ಲ, ಆದ್ರೆ ನನಗೆ ಅವಳಿಂದ ದೂರ ಇರ್ಬೇಕು ಅನ್ನಿಸ್ತು.

ಅವಳು:
ಎಲ್ಲಿ ಅವನು? ಇವತ್ತು ಬೆಳೆಗ್ಗೆ ಅವ್ನು ಮುಂಬೈನಿಂದ ವಾಪಸ್ಸು ಬಂದು ಸೀದಾ ಕಚೇರಿಗೆ ಬಂದಿರಬೇಕು ಅದಕ್ಕೆ ಬೆಳಗ್ಗಿನ ಬಸ್ಸಿನಲ್ಲಿ ಬಂದಿರಲಿಲ್ಲ. ಆದ್ರೆ ರಾತ್ರಿ ೮ ರ ಬಸ್ಸಿನಲ್ಲಿ ಅವ್ನು ಬರಬೇಕಾಗಿತ್ತು ಆದ್ರೆ ಯಾಕೆ ಬರ್ಲಿಲ್ಲ?
ಬಹುಶಃ ಅವನು ಪ್ರಯಾಣದಿಂದ ಹೈರಾಣ ಆಗಿರಬೇಕು. ನಾಳೆ ಮತ್ತೆ ಇಬ್ರು ಸಂಧಿಸಬಹುದೇನೋ. ನಾನು ಅವನಿಗೆ ಕಾರಣ ಹೇಳ್ತೀನಿ, ಮತ್ತೆ ನಾನೇ ಈ ಸಾರಿ ಅವನನ್ನ ಕಾಫೀಗೆ ಕರಿತಿನಿ.

ದಿನಾಂಕ:೨೧-ಮಾರ್ಚ್
ನಿನ್ನೆ ಅವಳು ಎಲ್ಲವನ್ನು ಹೇಳಿದಳು. ಎಂತಹ ಮೂರ್ಖ ನಾನು? ಅವಳ ಬಗ್ಗೆ ಎಷ್ಟು ಕೆಟ್ಟದಾಗಿ ಯೋಚಿಸಿದೆ. ಅವಳೆಷ್ಟು ಒಳ್ಳೆಯ ಹುಡುಗಿ. ಅವಳು ಮೀಟಿಂಗ್ ಹೋಗಿದ್ಲು ಅನ್ನೋ ಕಾರಣದಲ್ಲಿ ಅವಳ ತಪ್ಪಿರಲಿಲ್ಲ. ಅವಳು ಎಲ್ಲ ವಿವರಿಸಿದಾಗ ಮನಸ್ಸಿಗೆ ನಿರಾಳ ಅನ್ನಿಸ್ತು. ಇದಾದ ನಂತರ ಮುಂಚಿನ ತರಹ ನಾವು ಮತ್ತೆ ಇರೋಕೆ ಸಾಧ್ಯವಾಯಿತು. ಏನಾದ್ರೂ ಇರಲಿ ಇನ್ನು ಮೇಲೆ ನಾನು ಅವಳನ್ನ ಹೊರಗೆ ಹೋಗೋಕೆ ಕರೆಯೋದಿಲ್ಲ.

ದಿನಾಂಕ:೨೨-ಮಾರ್ಚ್
ಅವನು: what the hell.... ಅವಳನ್ನ ಅವಳು ಏನು ಅಂದುಕೊಂಡಿದಾಳೆ? ಇವತ್ತು ಅವಳು ನನ್ನನ ಕಾಫಿಗೆ ೪ ಗಂಟೆಗೆ ಬರೋಕೆ ಹೇಳಿದ್ಲು. ನಾನು ಸರಿಯಾದ ಸಮಯಕ್ಕೆ ಹೋದೆ. ಈ ಸಾರಿ ನಾನು ತಪ್ಪಿಸಿಕೊಳ್ಳ ಬಾರದು ಅಂತ ಹೋದ್ರೆ ಈ ಸಾರಿನು ಅವಳು ಕೈ ಕೊಟ್ಳು. ಯಾಕೆ ಹೀಗೆ ಮಾಡ್ತಿದಾಳೆ ಅವ್ಳು? ಏನನ್ನ ಸಾಧಿಸೋಕೆ ಹೊರಟಿದಾಳೆ? ಅವಳು ನನ್ನನ್ನ ಯಾಕೆ ಈ ತರಹ ಕಡೆಗಣಿಸ್ತಿದಾಳೆ ? ಇವಾಗ್ಲೇ ಕರೆ ಮಾಡಿ ನನ್ನ ಜೊತೆ ಯಾಕೆ ಈ ತರಹ ಆಟ ಆಡ್ತಾ ಇದ್ದೀಯ ಅಂತ ಕೇಳ್ಬೇಕು ಅಂದ್ಕೊಂಡೆ. ಆದ್ರೆ ೮ ಗಂಟೆಯ ಬಸ್ಸಿನಲ್ಲಿ ಅವಳನ್ನ ಸರಿಯಾಗಿ ಏನು ವಿಷಯ ಅಂತ ತಿಳ್ಕೊಬೇಕು ಅಂತ ನಿಶ್ಚಯ ಮಾಡ್ಕೊಂಡೆ. ಆದ್ರೆ ಅವ್ಳು ಇವತ್ತು ೮ಕ್ಕೆ ಬಸ್ಸಿನಲ್ಲಿ ಬರಲೇ ಇಲ್ಲ.

ದಿನಾಂಕ:೨೭-ಮಾರ್ಚ್
ಅವನು: ಅವಳನ್ನ ಕಳೆದ ೫ ದಿನಗಳಿಂದ ನೋಡೇ ಇಲ್ಲ. ಅವಳು ಆಫ್ಫಿಸ್ಸಿಗೆ ಬರ್ತಿದಾಳ? ಅವಳಿಗೆ ಮೈಯಲ್ಲಿ ಹುಶಾರಿಲ್ಲವಾ? ಅವ್ಳು ಹುಷಾರಾಗಿರ್ಲಿ ಅಂತ ಆಶಿಸ್ತೇನೆ. ಓ ದೇವ್ರೇ ಅವಳನ್ನ ಕಾಪಾಡಪ್ಪ.

ಡೈರಿಯ ಕೆಲವು ಹಾಳೆಗಳು - ಭಾಗ ೧೦

ದಿನಾಂಕ:೭-ಮಾರ್ಚ್
ಅವನು:
ಇವತ್ತು ನನ್ನ ಜೀವನ ಒಂದು ಮಹತ್ವದ ದಿನ ಅಂತಲೇ ಹೇಳಬಹುದು. ಅವಳನ್ನ ಇವತ್ತು ಮೊದಲ ಬಾರಿಗೆ ಮುಖ ಮುಖಿಯಾಗಿ ಮಾತನಾಡಿಸಿದೆ.Smiling. ಇದೆಲ್ಲ ಸಾಧ್ಯವಾಗಿದ್ದು ನನ್ನ ಗೆಳೆಯ ರಾಜೇಶನಿಂದ. ರಾಜೇಶನಿಗೆ ಇವತ್ತು ಇಲ್ಲಿ ಕೆಲಸ ಇದ್ದಿದ್ದರಿಂದ ನನ್ನ ಬಸ್ಸಿನಲ್ಲೇ ಪ್ರಯಾಣ ಮಾಡ್ತಿದ್ದ. ಆಶ್ಚರ್ಯ ಅಂದ್ರೆ ಅವನಿಗೆ ಅವಳು ಪರಿಚಯ ಇದ್ಲು!!!
ಅವರಿಬ್ಬರೂ ಕಾಲೇಜಿನಲ್ಲಿ ಸಹಪಾಟಿಗಳು ಆಗಿದ್ರಂತೆ. ನಮ್ಮಿಬ್ಬರನ್ನು ಅನೌಪಚಾರಿಕವಾಗಿ ಭೇಟಿ ಮಾಡಿಸಿದ. ಆಗ ನನಗೆಷ್ಟು ಸಂತೋಷ ಆಯಿತು ಅಂದ್ರೆ,ಕೇವಲ ಕೆಲವೇ ದಿನಗಳ ಹಿಂದೆ ಅವ್ಳು ನನ್ನ ಜೊತೆ ಕೂದಲು ನಿರಾಕರಿಸಿದ್ದಳು ಅನ್ನೋ ವಿಷಯ ಕೂಡ ನನಗೆ ಮರೆತು ಹೋಯಿತು. ನನ್ನ ಮನಸಿನಲ್ಲಿದ್ದ ಆತಂಕ, ಅವಳೆಡೆಗಿದ್ದ ನನ್ನ ದ್ವೇಷ, ಮತ್ತು ನಾನು ಹೇಡಿ ಅನ್ನೋ ಎಲ್ಲ ಭಾವನೆಗಳು ಕೊಚ್ಚಿಕೊಂಡು ಹೋದವು.
ನಾನೆಗ ಅವಳನ್ನ ನಿರ್ಭಯದಿಂದ ನೋಡಬಹುದು, ಈಗ ಸಿಕ್ಕಿರುವ ಈ ಅವಕಾಶವನ್ನ ನನ್ನ ಗುರಿ ಮುಟ್ಟುವತ್ತ ಕೊಂಡೊಯ್ಯಬಹುದು. ಓ ದೇವರೇ ನಿನಗೆ ಕೋಟಿ ವಂದನೆಗಳು. ರಾಜೇಶ್ ನೀನು ಕಳಿಸಿದ ಯಕ್ಷನಂತೆ ಬಂದ.

ಅವಳು:
ದೇವರೇ ನಿಂಗೆ ತುಂಬ ಥ್ಯಾಂಕ್ಸ್.... ನನಗಿವತ್ತು ತುಂಬ ಖುಷಿಯಾಗಿದೆ. ಅವನಿಗೂ ಕೂಡ! ಅದನ್ನ ಅವನ ಮುಖವನ್ನ ನೋಡಿ ಯಾರು ಬೇಕಾದರೂ ಗುರುತಿಸಬಹುದಾಗಿತ್ತು. ನನಗಾಗಿ ಅವನಲ್ಲಿ ಇನ್ನು ಭಾವನೆಗಳಿವೆ ಅನ್ನೋ ವಿಷ್ಯಾನೆ ನನ್ನಲ್ಲಿ ರೋಮಾಂಚನ ಉಂಟುಮಾಡುತ್ತಿದೆ. ನಾನವನ್ನ ಕಳೆದುಕೊಂಡೆ ಅಂದುಕೊಂಡಿದ್ದೆ, ದೇವರೇ ನಿನಗೆ ಧನ್ಯವಾದ ಅವನನ್ನ ನನಗೆ ಉಳಿಸಿಕೊಟ್ಟೆ. ನಾವೀಗ ಸ್ನೇಹಿತರು ಯಾರು ಮೊದಲು ಮಾತನಾಡಿಸಿದರು ಅನ್ನೋ ಪ್ರಶ್ನೆ ಇಲ್ಲಿ ಬರೋದಿಲ್ಲ. ದೇವ್ರೇ ನೀನು ನಿಜಕ್ಕೂ ಗ್ರೇಟ್.

ರಾಜೇಶ್:
ಇವತ್ತು ನಾನು ನಿರು ಜೊತೆ ಅವನ ಬಸ್ಸಿನಲ್ಲಿ ಪ್ರಯಾಣಿಸುತಿದ್ದೆ. ಅವ್ನು ನನ್ನ ಸ್ನೇಹಿತ. ಅದೇ ಬಸ್ಸಿನಲ್ಲಿ ನನ್ನ ಕಾಲೇಜಿನ ಸ್ನೇಹಿತೆ ಕೂಡ ಪ್ರಯಾಣಿಸುತ್ತಿದ್ದಳು. ಸುಮಾರು ವರ್ಷಗಳಾದ ಮೇಲೆ ಅವಳನ್ನ ನೋಡಿ ನನಗೆ ತುಂಬ ಸಂತೋಷ ಅನ್ನಿಸ್ತಿದೆ. ನನಗೆ ಇಲ್ಲಿಗೆ ವರ್ಗ ಆಗಿದಕ್ಕೆ ಏನೋ ಒಳ್ಳೆಯದು ಘಟಿಸಬಹುದು ಅನ್ನೋ ಸೂಚನೆ ಸಿಗ್ತಿದೆ. ಅವಳು ಕಾಲೆಜಿನಲ್ಲಿದ್ದಕಿಂತ ತುಂಬ ಚಂದ ಆಗಿದಾಳೆ. ಅವಳಿಗೆ ನನ್ನ ಮೇಲೆ ಕ್ರಶ್ ಇದ್ದಾಗ ನಾನೇಕೆ ಅವಳನ್ನ ನಿರಾಕರಿಸಿದೆ, ನಾನು ಮುಟ್ಠಾಳ ಅಂತ ಈಗ ಅನ್ನಿಸ್ತಿದೆ ನನಗೆ. ಅವಳಿನ್ನು ಯಾರನ್ನು ಪ್ರೀತಿಸುತ್ತಿಲ್ಲ, ಇನ್ನು ಒಂಟಿಯಾಗಿದಾಳೆ ಅಂತ ಅಂದ್ಕೋತೀನಿ. ನನಗೆ ಅಂಥಹ ಹುಡುಗೀನೆ ಬೇಕು. ನಾನೆಗ ಜೀವನದಲ್ಲಿ ನೆಲೆ ಕಂಡುಕೊಂಡಿದ್ದೇನೆ, ಪ್ರೀತಿ ವಿಷಯದಲ್ಲಿ ಮುಂದುವರಿಯಬೇಕು.

ಇವತ್ತು ನಾನು ಅವಳನ್ನ ನಿರುಗೆ ಪರಿಚಯ ಮಾಡಿದಾಗ, ಅವಳ ಮುಖ ದೀಪದಂತೆ ಹೊಳೆಯತೊಡಗಿತು. ಬಹಳ ದಿನದಿಂದ ಅವನನ್ನ ಮಾತನಾಡಿಸಬೇಕು ಅನ್ನೋ ಕಾತುರತೆ ಅವಳ ಮುಖದಲ್ಲಿ ಕಾಣಿಸುತ್ತಿತ್ತು. ನಿರುನ ಸ್ಥಿತಿ ಕೂಡ ಅವಳದ್ದಕ್ಕಿಂತ ಬೇರೆ ಏನು ಆಗಿರಲಿಲ್ಲ. ಅವರಿಬ್ಬರ ನಡುವೆ ಏನಾದ್ರೂ ನಡಿತಿದೇನ? ಅವರಿಬ್ಬರ ಮಧ್ಯೆ ಏನು ಇರಬಾರದು ಅಂದುಕೋತೀನಿ. ಓ ದೇವ್ರೇ ನಿಂಗೆ ಥ್ಯಾಂಕ್ಸ್ ಅವಳನ್ನ ಮತ್ತೆ ಭೀತಿಯಾಗುವ ಹಾಗೆ ಮಾಡಿದೆ. ಅವಳನ್ನ ನನ್ನವಳನ್ನಾಗಿ ಮಾಡಿಕೊಳ್ಳುವುದಕ್ಕೆ ಮತ್ತೊಮ್ಮೆ ಸಹಾಯ ಮಾಡ್ತಿಯ ಅಂತ ಅಂದುಕೊಳ್ತೀನಿ. ನಿರುನ ಇವಳಿಂದ ದೂರ ಇಡು ಪ್ಲೀಸ್.....

ದೇವರು:
ನಿಮಗೆ ಕೇವಲ ಖುಷಿ ಸಿಕ್ಕರೆ ಅದರ ಬೆಳೆ ಏನು ಅಂತ ಗೊತ್ತಾಗುತ್ತ? ಅದಕ್ಕೆ ಇಲ್ಲಿ ಎಲ್ಲದು ಪೂರ್ವನಿಯೋಜಿತವಾಗಿದೆ, ನಿಮಗೆ ಖುಷಿಯಾಗ್ತಿದೆ ಅಂದ್ರೆ ಅದರ ಬೆಳೆ ಏನು ಅಂತ ನಿಮಗೆ ಅರ್ಥವಾಗಿರಬೇಕು. ನಾನೇನು ಇಲ್ಲಿ ವಿಶೇಷವಾದದ್ದೇನು ಮಾಡಿಲ್ಲ. ಇಲ್ಲಿ ಅಗ್ತಿರೋದೆಲ್ಲ ಪೂರ್ವನಿಯೋಜಿತ. Smiling

ಡೈರಿಯ ಕೆಲವು ಹಾಳೆಗಳು - ಭಾಗ ೯

ದಿನಾಂಕ:೨೭-ಫೆಬ್ರವರಿ
ಅವನು:
ಈ ತಿಂಗಳು ಪೂರ್ತಿ ನನಗೆ ರಾತ್ರಿ ಪಾಳೆಯ ಕೆಲಸ ಇದ್ದಿದರಿಂದ ನಾನು ಬಸ್ಸಿನ ಬದಲು ಕಾರಿನಲ್ಲಿ ಓಡಾಡುತ್ತಿದ್ದೆ. ನಾನು ಕೆಲಸ ಮಾಡುತ್ತಿದ್ದ ಸಮಯ ಸಂಜೆ ೪ ರಿಂದ ಮುಂಜಾನೆ ೨.೩೦ ರ ವರೆಗೆ, ಹಾಗಾಗಿ ಬೆಳಗ್ಗೆ ಕೆಲಸ ಮಾಡುತ್ತಿದ್ದವರ ಜೊತೆ ನನ್ನ ಸಂಪರ್ಕ ತಪ್ಪಿ ಹೋಗಿತ್ತು. ಕೇವಲ ನನ್ನ ಸಹ ಕೆಲಸಗಾರರು ಹೋಗುವುದಕ್ಕಿಂತ ಮುಂಚೆ ನನಗೆ ಕೆಲಸದ ಬಗ್ಗೆ ವಿವರಿಸಿ ಹೋಗುತ್ತಿದ್ದರು.
ಈ ತಿಂಗಳು ಪೂರ್ತಿ ನಾನು ಬಸ್ಸಿನಲ್ಲಿ ಪ್ರಯಾಣ ಮಾಡಲಿಲ್ಲ. ಸ್ವಾಭಾವಿಕವಾಗಿ ನನಗವಳನ್ನು ನೋಡಲು ಆಗಲೇ ಇಲ್ಲ. ಅವಳು ನನ್ನ ಪಕ್ಕದ ಕಟ್ಟಡದಲ್ಲೇ ಕೆಲಸ ಮಾಡ್ತಾಳೆ, ಆದ್ರೆ ಅವಳಿರುವ ಕೋಣೆ ಯಾವುದು ಅಂತ ನಂಗೆ ಗೊತ್ತಿಲ್ಲ, ನನಗೆ ಗೊತ್ತಾದ್ರು ಕೂಡ ನಾನು ಹೋಗಿ ಅವಳನ್ನ ಮಾತನಾಡಿಸುತ್ತಿದೆ ಅಂತ ನಂಗೆ ಅನ್ನಿಸೋಲ್ಲ. ಅಷ್ಟು ಧೈರ್ಯ ನನ್ನಲಿಲ್ಲ.

ಸುಮಾರು ಒಂದು ತಿಂಗಳು ನಾನವಳನ್ನು ನೋಡಲಿಲ್ಲ, ಆದ್ರೆ ನಂಗೆ ಅವಳನ್ನ ನೋಡಬೇಕು ಅಂತಾ ಕಾತುರತೆಯು ನನ್ನಲಿಲ್ಲ. ನನಗೆ ಗೊತ್ತಿಲ್ಲದೇನೆ ನಾನು ಈ ವಿಷಯದಲ್ಲಿ ಗಟ್ಟಿಯಾಗಿದ್ದೇನೆ. ಆ ಸಂಜೆ ನಡೆದ ಘಟನೆ ಈ ನನ್ನ ಮನಸ್ಥಿತಿಗೆ ಕಾರಣವಾ?

ದಿನಾಂಕ:೨೮-ಫೆಬ್ರವರಿ
ಅವನು:
ಇವತ್ತು ನನ್ನ ಆಫಿಸ್ಸಿನ ಆವರಣದಲ್ಲಿ ಒಂದು ಚಲನಚಿತ್ರ ಪ್ರದರ್ಶಿಸುವವರಿದ್ದರು. ಈ ಮುಂಚೆ ಆ ಚಿತ್ರ ನೋಡಿದರು ಕೂಡ ಸ್ನೇಹಿತರ ಜೊತೆ ಸಂಭ್ರಮಿಸೋಣ ಅಂತಾ ನನ್ನ ಅಧಿಕಾರಿಗಳ ಹತ್ತಿರ ಹೇಳಿ ಬಂದೆ. ಸಂಭಾಷಣೆ ಸರಿಯಾಗಿ ಕೇಳಿಸುತ್ತಿರಲಿಲ್ಲ, ಆದ್ರೆ ಹಸಿರು ಹುಲ್ಲಿನ ಮೇಲೆ ಕುಳಿತು ಓಪನ್ ಥಿಯೇಟರ್ ನಲ್ಲಿ ಚಿತ್ರ ನೋಡುವುದಕ್ಕೆ ಮಜಾ ಬಂತು. ಇನ್ನೇನು ನಾನು ಕೆಲಸಕ್ಕೆ ಮರಳಬೇಕು ಅನ್ನುವಷ್ಟರಲ್ಲೇ ಕೇವಲ ಹತ್ತು ಅಡಿ ದೂರದಲ್ಲೇ ಅವಳು ನಿಂತಿದ್ದಳು.

ನನಗೆ ಗೊತ್ತಿಲ್ಲದ ಹಾಗೆ ನನ್ನ ಹೃದಯದ ಬಡಿತ ಶುಮಾಕರ್ ಫೆರಾರಿ ಗಿಂತ ಜೋರಾಗಿ ಓಡಲು ಶುರುವಾಯಿತು. ನನ್ನ ಹಿಂದೆ ಇರೋ ಯಾರಿಗೋ ಅವಳು ನಗೆ ಸೂಸಿದಂತಾಯಿತು, ನನ್ನ ಕಡೆ ನೀರವಾಗಿ ನೋಡಬಾರದು ಅಂತಾ ಬಹಳ ಪ್ರಯತ್ನ ಪಟ್ಟಳು. ಹಾಗೆ ಅವಳು ಅಲಿಂದ ಹೊರತು ಹೋದಳು.
ನಾನು ಕ್ಷಣ ಕಾಲ ಏನು ನಡೆಯಿತು ಅಂತಾ ಯೋಚಿಸುತ್ತಾ ಅಲ್ಲೇ ನಿಂತು ಬಿಟ್ಟೆ.
ಅವಳು ಯಾಕೆ ನಕ್ಕಳು? ನಾನಿನ್ನು ಇದೆ ಕಂಪನಿಯಲ್ಲಿ ಇದ್ದೇನೆ ಅನ್ನೋ ಖುಷಿಗೋ ಅಥವಾ ನನ್ನನ ಕೇರ್ ಮಾಡದೆ ನಿಜವಾಗಲೂ ನನ್ನ ಹಿಂದುಗಡೆ ಇದ್ದ ಯಾರಿಗೋ ಕೈ ಬೀಸಿದಳೋ? ಆದ್ರೆ ನಾವಿಬ್ರು ಎಷ್ಟು ಹತ್ತಿರದಲ್ಲಿದ್ವಿ ಅಂದ್ರೆ ಅವಳು ನನ್ನನ್ನ ಗಣನೆಗೆ ತಗೊಳ್ದೇಇರೊಕೆ ಸಾಧ್ಯವೇ ಇರಲಿಲ್ಲ.

ಅವಳು:
ಇವತ್ತು ಅವನನ್ನ ಚಲನಚಿತ್ರ ತೋರಿಸ್ತಿದ್ದ ಜಾಗದಲ್ಲಿ ನೋಡಿದೆ. ದೇವ್ರೇ ನಿನಗೆ ಕೋಟಿ ವಂದನೆಗಳು, ಅವನಿನ್ನೂ ಇದೆ ಕಂಪನಿಯಲ್ಲಿದ್ದಾನೆ. ನನಗೆ ಅವನನ್ನ ನೋಡಿ ಅವನಿಗೆ ಮಾತಾಡಿಸಬೇಕು ಅಂತಾ ಅನ್ನಿಸ್ತು. ಅವನನ್ನ ಮತ್ತೆ ನೋಡಿ ನನಗೆ ಬಹಳ ಖುಷಿ ಆಯಿತು, ನೀನು ಇಷ್ಟು ದಿನ ಎಲ್ಲಿದ್ದೆ, ನಿನಗೆ ಹುಷಾರು ಇರಲಿಲ್ವ, ನೀನು ಮನೆಯನ್ನೆನಾದ್ರು ಬದಲಾಯಿಸಿದಿಯ ಅಥವಾ ದಿನ ಆಫಿಸ್ಸಿಗೆ ಬೈಕ್ನಲ್ಲಿ ಬರ್ತೀಯ ಅಂತಾ ಕೇಳ್ಬೇಕು ಅನ್ನಿಸ್ತು. ಆದ್ರೆ ನಾನು ನನ್ನ ಬಾಯಿ ಸಹಿತ ಬಿಚ್ಚಲಿಲ್ಲ. ನಾನು ಸುಮ್ಮನೆ ನಿಂತುಬಿಟ್ಟೆ. ಅವನನ್ನ ಮತ್ತೆ ಮುಜುಗರಕ್ಕೆ ಈಡು ಮಾಡುವುದು ನನಗೆ ಬೇಡವಾಗಿತ್ತು.
ನಾನವನ ಬಗ್ಗೆ ಏನು ಯೋಚಿಸುತ್ತಿನೋ ಗೊತ್ತಿಲ್ಲ, ಆದ್ರೆ ಅವನನ್ನ ನೋಡಿದಾಗಲೆಲ್ಲ ನನ್ನ ಮನಸ್ಸು ಹೂವಿನಂತೆ ಅರಳುತ್ತೆ. ಅವನು ಮತ್ತೆ ನಮ್ಮ ಬಸ್ಸಿನಲ್ಲೇ ಬರಲಿ. ದಿನ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಬಹುದು, ಬಾಯಿಬಿಟ್ಟು ಶುಭಾಷಯ ಹೇಳ್ದಲೇ ಇದ್ರೂ ಕಣ್ಣಿನಲ್ಲೇ ವಿನಿಮಯ ಮಾಡಿಕೊಳ್ತೇವೆ.

ದಿನಾಂಕ:೫-ಮಾರ್ಚ್
ಅವನು:
ನಾನು ಮತ್ತೆ ಮಾಮೂಲಿನಂತೆ ಬೆಳಗ್ಗಿನ ಸಮಯದ ಕೆಲಸಕ್ಕೆ ವಾಪಸ್ಸು ಬಂದೆ. ಮತ್ತೆ ಎಲ್ಲ ಪರಿಚಿತರನ್ನು ನೋಡಲು ಖುಷಿ ಅನ್ನಿಸ್ತು. ಅದ್ರು ನನ್ನ ಕಣ್ಣುಗಳು ಒಂದು ಮುಖವನ್ನ ಮಾತ್ರ ಪ್ರತ್ಯೇಕವಾಗಿ ಹುಡುಕುತ್ತಿದ್ದವು.
ಎಂದಿನಂತೆ ದಿನಚರಿಯಂತೆ ನಾನಿವತ್ತು ಬಸ್ಸನ್ನು ಹತ್ತಿದೆ. ಅವಳು ಮುಖದಲ್ಲಿ ಯಾವುದೇ ಭಾವವನ್ನು ತೋರಿಸದೇ ಶೂನ್ಯದಲ್ಲಿ ದೃಷ್ಟಿಸುತ್ತ ಕುಳಿತಿದ್ದಳು, ಆದ್ರೆ ಯಾವಾಗ ಅವ್ಳು ನನ್ನ ನೋಡಿದಲೋ ಅವಳ ಮುಖದಲ್ಲಿ ನಗೆ ಚಿಲುಮೆಯಂತೆ ಚಿಮ್ಮಿ ಬಂತು. ನಾನು ಮತ್ತೆ ಬಸ್ಸಿನಲ್ಲಿ ಬಂದಿದಕ್ಕೆ ಅವಳು ಖುಷಿಗೊಂಡಳಾ? ಗೊತ್ತಿಲ್ಲ, ಆದ್ರೆ ಅವಳನ್ನ ನೋಡಿ ನನಗಂತೂ ಖುಷಿ ಆಯಿತು. Smiling

ಅವಳು:
ನನಗಂತೂ ಬಹಳ ಸಂತೋಷವಾಯಿತು, ನನಗಾದ ಸಂತೋಷವನ್ನ ಅದುಮಿಟ್ಟುಕೊಳ್ಳಲು ಬಹಳ ಪ್ರಯತ್ನ ಪಟ್ಟೆ. ನನ್ನ ಜಾಗದಿಂದ ಎದ್ದು ಹೋಗಿ ಅವನ ಪಕ್ಕ ಕುಳಿತುಕೊಂಡು ಮಾತು ಆಡ್ತಾ, ಆಡ್ತಾ ಹೀಗೆ ಮಾತಾಡ್ತಾನೆ ಇರ್ಬೇಕು ಅನ್ನಿಸ್ತು. .
ಹೇಯ್ ಇದೇನಿದು? ನನಗೆನಾಗ್ತಿದೆ? ಹೀಗೆ ನನಗೆ ಬೇರೆಯವರ ಬಗ್ಗೆ ಯಾವತ್ತು ಅನ್ನಿಸಿದ್ದಿಲ್ಲ. ಇದು ಕೇವಲ ಆವತ್ತು ಸಂಜೆ ನಡೆದ ಗಹ್ತನೆಯ ಬಗ್ಗೆ ಇರುವ ಸಿಂಪಥಿಯಾ ಅಥವಾ ನಿಜಾವದ ಪ್ರೀತಿಯಾ? ಸಾಧ್ಯವೇ ಇಲ್ಲ. ನನಗೆ love at first sight ಅನ್ನೋದರಲ್ಲಿ ನಂಬಿಕೆಯೇ ಇಲ್ಲ. ನಮ್ಮಿಬ್ಬರಿಗೂ ಪರಿಚಯವೇ ಇಲ್ಲ, ಪರಸ್ಪರರ ಬಗ್ಗೆ ಏನು ಗೊತ್ತಿಲ್ಲ, ಹಾಗಾದ್ರೆ ಇದು ಪ್ರೀತಿ ಇರೋಕೆ ಹೇಗೆ ಸಾಧ್ಯ? ಪ್ರಾಯಶಃ ಇದು ನಾನು ಕೊಟ್ಟುಕೊಳ್ಳುತ್ತಿರುವ ಸಮಜಾಯಿಷಿ, ಏನಾದ್ರೂ ಇರಲಿ, ಆದ್ರೆ ಈ ಮಧುರ ಭಾವನೆಯನ್ನು ತುಂಬ ಇಷ್ಟ ಪಡ್ತೀನಿ. Smiling

ಡೈರಿಯ ಕೆಲವು ಹಾಳೆಗಳು - ಭಾಗ ೮

ದಿನಾಂಕ:೩-ಫೆಬ್ರವರಿ
ಅವನು:
ಆ ಘಟನೆ ಆದ ನಂತರ ನಾನು ಅವಳನ್ನ ನೋಡುವುದನ್ನೇ ಬಿಟ್ಟಿದ್ದೇನೆ. ಯಾಕೋ ಗೊತ್ತಿಲ್ಲ ನನ್ನ ಅಂತರಾಳದ ಧ್ವನಿ ಅವಳಿಂದ ದೂರಾನೆ ಇರು ಅಂತ ಹೇಳ್ತಾ ಇದೆ. ನಾನೇನು ಬೀದಿಯಲ್ಲಿ ಹೋಗೋ ಭಿಕ್ಷುಕ ಅಲ್ಲ ಈ ತರಹ ನನ್ನ ನಡೆಸಿಕೊಳ್ಳುವುದಕ್ಕೆ. ಅವಳು ತನ್ನನ್ನ ಏನೋ ಅಂದುಕೊಂಡಿರಬಹುದು. ಅವಳು ನಿಜವಾಗಲೂ ಸುಂದರಿ, ಹಾಗಂತ ಅವಳು ನನ್ನನ್ನ ಈ ತರಹ ಅವಮಾನ ಮಾಡುವುದು ಸರಿಯಲ್ಲ. ನಾನು ಪ್ರತಿಜ್ಞೆ ಮಾಡಿದ್ದೇನೆ ಇನ್ನು ಮೇಲೆ ಅವಳನ್ನ ನಾನು ನೋಡೋದಿಲ್ಲ ಅಂತ. ಅವಳನ್ನ ಸುಮ್ಮನೆ ದೂರ ಇಡುವುದೇ ವಾಸಿ.

ಆದ್ರೆ ನನಗೆ ಈ ತರಹ ಇರೋಕೆ ಸಾಧ್ಯವಿಲ್ಲ. ಅವಳನ್ನ ನಾನು ತುಂಬ ಇಷ್ಟ ಪಡುತ್ತೇನೆ ಮತ್ತೆ ಅವಳ ಜೊತೆ ಇರೋಕೆ ಇಷ್ಟ ಪಡ್ತೇನೆ. ಅವಳು ತಪ್ಪು ಮಾಡಿದ್ದಾಳೆ ನಿಜ ಆದ್ರೆ ಅದು ಸ್ವಾಭಾವಿಕ ಅಂತ ಅನ್ನಿಸೋದಿಲ್ಲ. ಅವಳು ನನ್ನನ್ನ ಇಷ್ಟ ಪಡಲ್ಲ ಮತ್ತೆ ಅವಳ ಬಗ್ಗೆ ನನ್ನಲ್ಲಿ ಆಸಕ್ತಿ ಬೆಳೆಯಬಾರದು ಅಂತ ಹೀಗೆ ಮಾಡ್ತಿದಾಳೆ. ಎಷ್ಟು ಸಿಂಪಲ್ ಅಲ್ವ? ಅಷ್ಟೆ ಇದು. ನನ್ನ ಭಾವನೆಗಳಿಗೆ, ಕನಸುಗಳಿಗೆ ಈಗ ಸಂಪೂರ್ಣ ವಿರಾಮ ಹಾಕೋ ಕಾಲ ಬಂದಿತು. ಆದ್ರೆ ಅವಳನ್ನ ನಾನು ನೋಡ್ದೆ ಇರೋಕೆ ನನ್ನಿಂದ ಆಗುತ್ತೆ ಅಂತ ಅನ್ನಿಸೋಲ್ಲ. ನನಗಿದನ್ನು ಮಾಡೋಕೆ ಸಾಧ್ಯವಾ?
ಒಂದು ಹೇಳಿಕೆ ಇದೆ ,"ಓ ದೇವರೇ, ನನ್ನ ಸುತ್ತಲಿನ ಕತ್ತಲೆಯನ್ನು ಅಳಿಸಿ ನನಗೆ ಸಹಾಯ ಮಾಡು, ಕನಿಷ್ಠ ಅದನ್ನ ಅಳಿಸಲು ನನಗೆ ಶಕ್ತಿ ಕೊಡು. ಅದನ್ನ ನನ್ನಿಂದ ಬದಲಿಸೋಕೆ ಸಾಧ್ಯವಾಗದಿದ್ದರೆ, ಅದನ್ನ ಭರಿಸುವ ಶಕ್ತಿ ಕೊಡು ". ಓ ದೇವ್ರೇ, ನನ್ನ ಮಾತು ಕೇಳಿಸುತ್ತಾ?

ದೇವರು:
ನೀನು ಸುಖವಾಗಿರುವಾಗ ನನ್ನ ನೆನಪಾದರು ಬರುತ್ತಾ, ನಿನಗೆ? ನೀನು ಯಾವುದಾದರು ಕಷ್ಟದಲ್ಲೋ ಅಥವಾ ಸಂಕಟದಲ್ಲೋ ಬಿದ್ದಾಗ ನನ್ನ ನೆನಪು ಮಾಡಿಕೊಳ್ಳಲು ಶುರು ಮಾಡ್ತಿಯ ಅಥವಾ ಬೇಡಿಕೊಳ್ಳಲು ಶುರು ಮಾಡ್ತಿಯ, ಅಲ್ವ? ಇವಗಳು ಕೂಡ ನಾನು ಮಧ್ಯ ಪ್ರವೆಶಿಸೋಲ್ಲ. ನನ್ನ ಪ್ರಪಂಚ ಸರಳ ಸೂತ್ರದಿಂದ ಮಾಡಿದ್ದಲ್ಲ. ಇಲ್ಲಿ ನಡೆಯುವ ಪ್ರತಿ ಒಂದು ನಡೆ ಅಥವಾ ಘಟನೆ ಕೂಡ ಭವಿಷ್ಯದ ಮತ್ತು ಭೂತದ ಘಟನೆಗಳನ್ನು ಆಧಾರಿಸಿ ಮಾಡಿದ್ದೇನೆ. ಹೀಗಿರುವಾಗ ನಾನೀಗ ಮಧ್ಯ ಪ್ರವೇಶಿಸಿ, ನಾನೇ ನಿರ್ಮಿಸಿರುವ ಸಮತೊಲನವನ್ನ ಮುರಿಯಬೇಕೆ?

ದಿನಾಂಕ:೧೪-ಫೆಬ್ರವರಿ
ಅವನು:
ನಾನಿದನ್ನು ಬರೆಯುವ ಹೊತ್ತಿಗೆ ಪ್ರೇಮಿಗಳ ದಿನ ಮುಗಿದಿದೆ. ಅದೇನು ಗಣನೆಗೆ ತಗೆದುಕೊಳ್ಳಬೇಕಾದ ವಿಷಯ ಅಲ್ಲ, ಯಾಕಂದ್ರೆ ಅಂಥ ವಿಶೇಷ ಏನು ನಡೆಯಲಿಲ್ಲ. ಈ ದಿನ ಕೂಡ ನನ್ನ ಬೇರೆ ೩೬೫ ದಿನಗಳ ತರಹ ಅಥವಾ ಕೆಳೆದ ೨೧ ಪ್ರೇಮಿಗಳ ದಿನ ತರಹನೇ ಇತ್ತು. ನಾನು ಕನಿಷ್ಠ ಅವಳ ಕುಡಿ ನೋಟವನ್ನ ನೋಡಬಹುದು ಅಂದುಕೊಂಡಿದ್ದೆ ಆದ್ರೆ ವಿಧಿ ಅದಕ್ಕೂ ಕೂಡ ಕಲ್ಲು ಹಾಕಿತು, ಕಾರಣ ನನ್ನ ರಾತ್ರಿ ಪಾಳೆಯ ಕೆಲಸ. ಈಗ ನಾನು ಅವಳನ್ನ ನೋಡುವುದರಿಂದ ಕೂಡ ವಂಚಿತನಾಗಿದ್ದೇನೆ. ಇವತ್ತು ಸಾಯಂಕಾಲದ ಸಮಯದಲ್ಲಿ ಗೇಟಿನ ಹತ್ತಿರ ಅವಳಿಗಾಗಿ ಕಾಯುತ್ತ ನಿಂತೇ, ಆದ್ರೆ ಅವಳು ಬರಲಿಲ್ಲ. ನನಗನ್ಸುತ್ತೆ ದೇವ್ರು ಅವಳಿಂದ ದೂರ ಇರು ಅಂತ ಹೇಳೋಕೆ ಈ ತರಹ ಸೂಚನೆ ನೀಡ್ತಿದಾನೆ ಅಂತ. ಅವತ್ತಿನ ಅವಮಾನ ಮೊದಲನೆಯದಾದರೆ ಇದು ಎರಡನೆಯದು. ಆಯಿತು ದೇವರೇ ನನಗೆ ಗೊತ್ತಾಯಿತು.
ಅವಳು:
ಪ್ರೇಮಿಗಳ ದಿನ ಇವತ್ತು ಮುಗಿದು ಹೋಯಿತು, ಆದ್ರೆ ನಾನು ಇವತ್ತು ಅವನನ್ನ ನೋಡೋಕು ಆಗಲಿಲ್ಲ. ಇವತ್ತು ಅವ್ನು ಬಂದು ನನ್ನ ಜೊತೆ ಮಾತಾಡ್ತಾನೆ ಅಂತ ಅನ್ಕೊಂಡಿದ್ದೆ, ಆದ್ರೆ ಅವ್ನು ಬರಲಿಲ್ಲ. ಒಂದು ಗಮನಿಸಿದಿನಿ ಇತ್ತೀಚಿಗೆ ಅವ್ನು ನಮ್ಮ ಬಸ್ಸಿನಲ್ಲಿ ಬರುತ್ತಿಲ್ಲ. ಅವನೇನಾದರು ಮನೆಯನ್ನ ಬೇರೆ ಕಡೆ ಮಾಡಿದನ ಅಥವಾ ಕಂಪನಿಯನ್ನೇ ಬದಲಾಯಿಸಿದನಾ?
ಇವತ್ತು ನನ್ನ ಗೆಳತಿಯರೆಲ್ಲ ಅವರ ಸಂಗಾತಿಯ ಜೊತೆಗೂಡಿ ಹೊರಗಡೆ ಹೋಗಿದ್ದಾರೆ ಆದ್ರೆ ನಾನೊಬ್ಳೇ ಮನೆಯಲ್ಲಿ ಕುಳಿತಿದ್ದೇನೆ. ಹಾಗಾಗಿ ನಾನು ಆಫಿಸ್ಸಿನಿಂದ ಮನೆಗೆ ಬೇಗ ಬಂದುಬಿಟ್ಟೆ. ಅವತ್ತು ಸಂಜೆ ಏನಾದ್ರೂ ಆಗಿದ್ದರೆ ಇವತ್ತು ನಾನು ಮನೆಯಲ್ಲಿ ಹೀಗೆ ಕೊತ್ಗೊತಾ ಇರ್ಲಿಲ್ಲ. ನನಗನ್ಸುತ್ತೆ ವಿಧಿಗೆ ನಾವಿಬ್ರು ಜೊತೆಯಾಗಿ
ಇರೋದು ಇಷ್ಟ ಇಲ್ಲ ಅಂತ. ಆಯಿತು ದೇವ್ರೇ ಇದು ಹೀಗೆ ಆಗಬೇಕು ಅಂತ ಬರೆದಿದ್ದರೆ ನಾನದನ್ನು ಒಪ್ಪಿಕೊಳ್ತೇನೆ. ನನಗೆ ಬೇರೆ ದಾರಿಯೇ ಇಲ್ಲ. ಅದ್ರು ನೀನು ................